ಗೋಣಿಕೊಪ್ಪಲು, ಮೇ 24: ಭಾರತವನ್ನು 21ನೇ ಶತಮಾನದಲ್ಲಿ ಮಹಾನ್ ಹಿಂದೂ ನಾಯಕ ಮುನ್ನಡೆಸಲಿದ್ದಾರೆ. ವಿಶ್ವವೇ ಹಿಂದೂ ರಾಷ್ಟ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಭಾರತ ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಪ್ರಜ್ವಲಿಸಲಿದೆ ಎಂದು ಕ್ರಿಸ್ತಶಕ ಪೂರ್ವದಲ್ಲಿಯೇ ಖ್ಯಾತ ತತ್ವಜ್ಞಾನಿ ನೋಸ್ಟ್ರಾಡಾಮಸ್ ಭವಿಷ್ಯ ನುಡಿದಿರುವದು ಈಗ ನಿಜವಾಗಿದೆ. ಆ ಮಹಾನ್ ದೇಶಭಕ್ತ ಬೇರಾರೂ ಅಲ್ಲ, ನರೇಂದ್ರ ಮೋದಿ ಎಂದು ಕೊಡಗು ಜಿಲ್ಲಾ ಬಿಜೆಪಿ ಪ್ರಮುಖ ಗುಮ್ಮಟ್ಟೀರ ಕಿಲನ್ ಗಣಪತಿ ಅಭಿಪ್ರಾಯಪಟ್ಟರು.

ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಇಲ್ಲಿನ ನಗರ ಬಿಜೆಪಿ ಪಕ್ಷದ ವತಿಯಿಂದ ಜರುಗಿದ ವಿಜಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗೋಣಿಕೊಪ್ಪಲು ಕ್ಷೇತ್ರದ ಜಿ.ಪಂ. ಸದಸ್ಯ ಹಾಗೂ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಮಾತನಾಡಿ, ಇಂದು ದೇಶವ್ಯಾಪಿ ಬಿಜೆಪಿ ಜಯಭೇರಿ ಬಾರಿಸಿದೆ. ಕೊಡಗಿನಲ್ಲಿಯೂ ಬಿಜೆಪಿಗೆ ಉತ್ತಮ ಮುನ್ನಡೆ ದೊರಕಿದೆ ಎಂದು ಹೇಳಿದರು.

ಮಾಜಿ ತಾ.ಪಂ. ಅಧ್ಯಕ್ಷೆ ರಾಣಿ ನಾರಾಯಣ ಮಾತನಾಡಿ, ಮೋದಿ ಅಲೆಯಿಂದಾಗಿ ದೇಶದ ಎಲ್ಲೆಡೆ ಬಿಜೆಪಿ ವಿಜಯಪತಾಕೆ ಹಾರಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇಂದು ಪೂರ್ವಾಹ್ನ 11 ಗಂಟೆ ಸುಮಾರಿಗೆ ಗೋಣಿಕೊಪ್ಪಲಿನ ಬಿಜೆಪಿ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಸೇರಿ ನರೇಂದ್ರ ಮೋದಿ, ಅಮಿತ್ ಶಾ, ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಪರವಾಗಿ ಜಯಘೋಷ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಿಜಯೋತ್ಸವದಲ್ಲಿ ಬಿಜೆಪಿ ನಗರಾಧ್ಯಕ್ಷ ಗಾಂಧಿ ದೇವಯ್ಯ, ಪ್ರಮುಖರಾದ ಕೆ.ಬಿ. ಗಿರೀಶ್‍ಗಣಪತಿ, ಕೊಡಗು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿ ಪಿ.ಎಂ. ಹಕೀಮ್, ನಗರ ಉಪಾಧ್ಯಕ್ಷ ಪಿ.ಎಸ್. ಲೋಕೇಶ್, ಕಾರ್ಯದರ್ಶಿ ರಾಮಕೃಷ್ಣ, ಮಾಜಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯ ಮಹಮ್ಮದ್ ಚರ್ದು, ಪ್ರಮುಖರಾದ ಸುಮಿಸುಬ್ಬಯ್ಯ, ರತಿ ಅಚ್ಚಪ್ಪ, ನೂರೇರ ಅಚ್ಚಪ್ಪ, ರಾಧಾಕೃಷ್ಣ ಜಿ., ಹಿರಿಯ ಜನಸಂಘದ ಕಂಜಿತಂಡ ಬೆಳ್ಳಿಯಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜೇಶ್, ಸದಸ್ಯ ಮಂಜು, ಮೂಕಳೇರ ಮಧು ಮುಂತಾದವರು ಭಾಗವಹಿಸಿದ್ದರು.

- ಟಿ.ಎಲ್.ಎಸ್.