ಗೋಣಿಕೊಪ್ಪ ವರದಿ, ಮೇ 24 : ದಕ್ಷಿಣ ಕೊಡಗಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆ, ಗಾಳಿಗೆ ಕಿರುಗೂರು ಗ್ರಾಮದಲ್ಲಿ 4 ಮನೆಗಳು ಭಾಗಶಃ ಹಾನಿಯಾಗಿವೆ. ಸುಮಾರು 4 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ನಷ್ಟಕ್ಕೆ ಒಳಗಾದವರು ದೂರು ನೀಡಿದ್ದಾರೆ.
ಘಟನೆಯಿಂದ ಮನೆಯಲ್ಲಿದ್ದ ಮಹಿಳೆ ಹೆದರಿ ಆಘಾತದಿಂದ ಅಸ್ವಸ್ತಗೊಂಡ ಘಟನೆ ನಡೆದಿದೆ. ಕೃಷಿಕರುಗಳಾದ ಕೊಕ್ಕೇಂಗಡ ನಾಣಯ್ಯ, ಕೊಕ್ಕೇಂಗಡ ಕಾವೇರಪ್ಪ, ಕೆ. ಜೋಯಪ್ಪ, ಕೆ. ಪಾರ್ವತಿ ನಷ್ಟಕ್ಕೆ ಒಳಗಾದವರು. 4 ಜನರಿಗೆ ಸೇರಿದ ಮನೆಯ ಹೆಂಚುಗಳು ಹಾಗೂ ಶೀಟ್ಗಳು ಹಾರಿ ಹೋಗಿವೆ. ಶೀಟ್ಗಳು ಮನೆಯಿಂದ ಸುಮಾರು 60 ಅಡಿಗಳಿಗಿಂತಲೂ ಹೆಚ್ಚು ದೂರದವರೆಗೆ ಹಾರಿವೆ. ತೋಟದಲ್ಲಿನ ಮರಗಳ ರೆಂಬೆಗಳು ಮುರಿದು ಬಿದ್ದಿದ್ದು, ಮತ್ತಷ್ಟು ನಷ್ಟ ತಂದಿದೆ. ಸ್ಥಳೀಯರು ಇವರ ನೆರವಿಗೆ ಬಂದರು.
ಘಟನೆಯಿಂದ ಮನೆಯಲ್ಲಿದ್ದ ಮಹಿಳೆ ಮುತ್ತಮ್ಮ (55) ಅಘಾತಕ್ಕೆ ಒಳಗಾಗಿ ಅಸ್ವಸ್ತಗೊಂಡರು. ಮನೆಯ ಶೀಟ್ಗಳು ಹಾರುವ ಸಂದರ್ಭ ಮನೆಯ ಗೋಡೆ ಕುಸಿಯುತ್ತಿದೆ ಎಂದು ಭಾವಿಸಿ ಅಸ್ವಸ್ತಗೊಂಡಿದ್ದರು. ನಂತರ ಅವರಿಗೆ ಪೊನ್ನಂಪೇಟೆ ರಾಮಕೃಷ್ಣ ಆಶ್ರಮ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ.
ಶುಕ್ರವಾರ ಪೊನ್ನಂಪೇಟೆ ಕಂದಾಯ ನಿರೀಕ್ಷಕ ರಾಧಾಕೃಷ್ಣ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ತಲಾ 1 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ನೊಂದವರು ಮನವಿ ಮಾಡಿಕೊಂಡರು. ಸೂಕ್ತ ಪರಿಹಾರ ನೀಡುವದಾಗಿ ಅಧಿಕಾರಿ ಭರವಸೆ ನೀಡಿದರು. -ಸುದ್ದಿಪುತ್ರ