ಗೋಣಿಕೊಪ್ಪಲು, ಮೇ 24: ಗೋಣಿಕೊಪ್ಪ, ಪೊನ್ನಂಪೇಟೆ, ಅರುವತೋಕ್ಲು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಮಾಡಲು ನಿಗದಿ ಪಡಿಸಿದ ಹಳ್ಳಿಗಟ್ಟುವಿನಲ್ಲಿ ಇನ್ನು ಮುಂದೆ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲಾಗುವದು; ಕಸ ಹೊತ್ತು ಬರುವ ವಾಹನಗಳನ್ನು ತಡೆದು ಅಡ್ಡಿ ಪಡಿಸಿದರೆ ಸರ್ಕಾರಿ ನಿಯಮದಡಿ ಪ್ರಕರಣ ದಾಖಲು ಮಾಡುವದಾಗಿ ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಣಾಧಿಕಾರಿ ಜಯಣ್ಣ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ದಿನದಲ್ಲಿ ಗೋಣಿಕೊಪ್ಪಲುವಿನ ಕಸ ವಿಲೇವಾರಿ ಸಮಸ್ಯೆ ಕಗ್ಗಂಟಾಗುತ್ತಿದ್ದಂತೆಯೇ ತಾಲೂಕು ಕಾರ್ಯನಿರ್ವಹಣಾಧಿಕಾರಿ ಹಿರಿಯ ಅಧಿಕಾರಿಗಳೊಂದಿಗೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿ ವರದಿ ನೀಡಿದ್ದರು. ಅಲ್ಲದೆ, ಕಸ ವಿಲೇವಾರಿಗೆ ಸಂಬಂಧಿಸಿದಂತೆ ಪೊನ್ನಂಪೇಟೆ ಸಾಮಥ್ರ್ಯ ಸೌಧದ ಸಭಾಂಗಣದಲ್ಲಿ ಅಧಿಕಾರಿಗಳ, ಜನಪ್ರತಿನಿಧಿಗಳ ತುರ್ತು ಸಭೆ ಕರೆದು ಕಸ ವಿಲೇವಾರಿಗೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಿದ್ದರು.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪೊನ್ನಂಪೇಟೆ ಹೋಬಳಿ ಹಳ್ಳಿಗಟ್ಟು ಗ್ರಾಮದಲ್ಲಿ ಕಸ ವಿಲೇವಾರಿಗಾಗಿ ಕಾಯ್ದಿಟ್ಟ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದ ಸಂದರ್ಭ ಸ್ಥಳೀಯರಿಂದ ವ್ಯಾಪಕ ವಿರೋಧ ಕಂಡು ಬಂತು. ಅಲ್ಲದೆ ಕಸ ವಿಲೇವಾರಿಯ ವಾಹನಗಳನ್ನು ತಡೆಹಿಡಿದು ಪ್ರತಿಭಟಿಸುವ ಮೂಲಕ ಯಾವದೇ ಕಾರಣಕ್ಕೂ ಕಸ ವಿಲೇವಾರಿಗೆ ಅವಕಾಶ ನೀಡುವದಿಲ್ಲ ಎಂದು ಆಗ್ರಹಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಾದ ಜಯಣ್ಣನವರು ನಿಗದಿತ ಜಾಗದಲ್ಲಿ ಕಸ ವಿಲೇವಾರಿಗಾಗಿ ಮೂರು ಪಂಚಾಯಿತಿಗಳಿಗೆ ಮೀಸಲಾಗಿರಿಸಿದೆ. ಈ ಸ್ಥಳಕ್ಕಾಗಿ ಲಕ್ಷಾಂತರ ಹಣವನ್ನು ಸರ್ಕಾರದಿಂದ ವಿನಿಯೋಗ ಮಾಡಲಾಗಿದೆ. ಕಸ ವಿಲೇವಾರಿಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದರೂ ಗ್ರಾಮಸ್ಥರು ದಿಕ್ಕರಿಸಿದ್ದರು.

ಇದರಿಂದ ಎಚ್ಚೆತ್ತ ಕಾರ್ಯನಿರ್ವಾಹಣಾಧಿಕಾರಿ ಮುಂದೆ ಸಮಸ್ಯೆ ಯಾಗದಂತೆ ಮುಂಜಾಗ್ರತ ಕ್ರಮವಾಗಿ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದ ಪ್ರಮುಖರನ್ನು ಪೊನ್ನಂಪೇಟೆ ಪೊಲೀಸ್ ಠಾಣೆಗೆ ಕರೆಸಿ ಕಸ ವಿಲೇವಾರಿಗೆ ಅವಕಾಶ ನೀಡಬೇಕು. ತಪ್ಪಿದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

-ಹೆಚ್.ಕೆ. ಜಗದೀಶ್