ಕುಶಾಲನಗರ, ಮೇ 23: ಸರ್ಕಾರಿ ನೌಕರರು ನಿವೃತ್ತಿಯ ನಂತರ ಸಂಘಟಿತರಾಗಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವದ ರೊಂದಿಗೆ ತಮ್ಮ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್.ಕೆ. ಕೇಶವಯ್ಯ ಹೇಳಿದರು.

ಸ್ಥಳೀಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ, ನಿವೃತ್ತ ಸರ್ಕಾರಿ ನೌಕರರಿಗೆ ಸರಕಾರ ಕಲ್ಪಿಸುವ ಸೌಲಭ್ಯಗಳನ್ನು ಸಂದರ್ಭ ಅನುಸಾರ ನೀಡಬೇಕು ಎಂದರು.

ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ನಿವೃತ್ತ ನೌಕರರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುವದು ಸರಿಯಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕಗಳಿಸಿದ ಮಹಾದೇವಮ್ಮ ಅವರ ಪುತ್ರಿ ಸ್ಪೂರ್ತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಹಿರಿಯ ಸದಸ್ಯ ಎಂ.ಹೆಚ್. ರಾಮಯ್ಯ ಅವರನ್ನು ಸನ್ಮಾನಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಯು.ಟಿ. ರಾಮಯ್ಯ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ಸಂಘದ ಪ್ರಮುಖರಾದ ಬಿ.ಡಿ. ಅಣ್ಣಯ್ಯ, ಹೆಚ್.ಕೆ. ರಾಜಪ್ಪ, ಅಣ್ಣಯ್ಯ, ಹಾನಗಲ್ಲು ಜಯಪ್ಪ, ಕಾಳಯ್ಯ, ಸರೋಜ ಮತ್ತಿತರರು ಇದ್ದರು.