ಮಾದಾಪುರ, ಮೇ 23: ಜಂಬೂರು ಗ್ರಾಮದ ಸರಕಾರಿ ತೋಟಗಾರಿಕಾ ಕ್ಷೇತ್ರದ ಐವತ್ತು ಎಕರೆ ಜಾಗದಲ್ಲಿ ಕಳೆದ ಪ್ರಾಕೃತಿಕ ವಿಕೋಪ ಸಂದರ್ಭ ಎದುರಾಗಿರುವ ಅನಾಹುತದಿಂದ ಸಂತ್ರಸ್ತರಾದವರಿಗೆ ರಾಜ್ಯ ಸರಕಾರದಿಂದ ಪುನರ್ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಉತ್ತರ ಕರ್ನಾಟಕದ ಹತ್ತಾರು ಕುಟುಂಬಗಳ ಕಾರ್ಮಿಕರು ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದಾರೆ.
ಈ ಕಾರ್ಮಿಕರು ತಾತ್ಕಾಲಿಕ ಟೆಂಟ್‍ಗಳಲ್ಲಿ ನೆಲೆಸುವದರೊಂದಿಗೆ ನಿತ್ಯ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದು, ತುರ್ತು ಯಾವ ಕೆಲಸಕ್ಕೂ ವ್ಯವಸ್ಥೆ ಕಲ್ಪಿಸಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಕೆಲಸಗಾರರು ನಿತ್ಯವೂ ಅಕ್ಕ ಪಕ್ಕದವರ ತೋಟಗಳಲ್ಲಿ ಬಯಲು ಶೌಚಕ್ಕೆ ತೆರಳುವಂತಾಗಿದೆ. ಈ ಬಗ್ಗೆ ಜಂಬೂರು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಕಾರ್ಮಿಕರು ತಮ್ಮ ತೋಟಗಳಲ್ಲಿ ಎಲ್ಲೆಂದರಲ್ಲಿ ಗಲೀಜು ಮಾಡುತ್ತಿದ್ದಾರೆ ಎಂದು ‘ಶಕ್ತಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.