ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು, ಇಂದು ಧರ್ಮದ ಹೆಸರಿನಲ್ಲಿ ಅನಗತ್ಯ ಗೊಂದಲಗಳು, ಪ್ರಚೋದನೆಗಳು ನಡೆಯುತ್ತಿದ್ದು, ಇದರಿಂದ ಪ್ರಚೋದಕರಿಗೆ ಏನಾದರೂ ಪ್ರಯೋಜನ ಆದೀತೇ ಹೊರತು, ಸಾರ್ವತ್ರಿಕವಾಗಿ ಜನತೆಗೆ ತೊಂದರೆ ಆಗಲಿದೆ ಎಂದರು. ಮಾನವರ ಹತ್ಯೆ, ಉಗ್ರಗಾಮಿತ್ವ, ಪ್ರಚೋದನೆಯ ಹೆಸರಿನಲ್ಲಿ ಧಾರ್ಮಿಕವಾದ ಮತಾಂಧತೆ ಇತ್ಯಾದಿಗಳಿಂದ ಜನರ ಬದುಕಿಗೆ ಎಂದೂ ನೆಮ್ಮದಿ ದೊರಕದು ಎಂದ ರಾಜೇಂದ್ರ ಅವರು, ಈಗಾಗಲೇ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ದುರಂತದಿಂದ ಹಲವರ ಬದುಕು ಕಷ್ಟಕರವಾಗಿ ಪರಿಣಮಿಸಿದೆ ಎಂದರು. ಪ್ರತಿಯೊಬ್ಬರೂ ಸಾಮಾಜಿಕ ಜೀವನದೊಂದಿಗೆ ತಮ್ಮ ಮಕ್ಕಳಿಗೆ ಅವರವರ ಧರ್ಮದ ಬಗ್ಗೆ ತಿಳುವಳಿಕೆ ನೀಡುವಂತಾಗಬೇಕು. ದುರ್ಗುಣಗಳು ಕಂಡಲ್ಲಿ ತಿದ್ದಿ ತಿಳಿಹೇಳುವಂತಾಗಬೇಕು ಎಂದು ಹೇಳಿದ ರಾಜೇಂದ್ರ ಅವರು, ವಿವಿಧ ಜನಾಂಗ ಬಾಂಧವರನ್ನು ಒಟ್ಟು ಸೇರಿಸಿ ಜಮಾತೇ ಇಸ್ಲಾಮಿ ಸಂಘಟನೆ ಏರ್ಪಡಿಸಿದ ಇಫ್ತಾರ್ ಕೂಟಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕೊಡಗು ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ. ಸತೀಶ್ ಶಿವಮಲ್ಲಯ್ಯ, ಮಡಿಕೇರಿ ಎಫ್.ಎಂ.ಸಿ. ಕಾಲೇಜಿನ ಪ್ರಿನ್ಸಿಪಾಲ್ ಡಾ.ಟಿ.ಡಿ. ತಿಮ್ಮಯ್ಯ, ಜಾಮಿಯಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಇಮ್ರಾನ್, ಕೊಡಗು ಕ್ಯಾಥೋಲಿಕ್ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ಪಿ.ಟಿ. ಸೈಮನ್ ಮುಂತಾದವರು ಉಪಸ್ಥಿತರಿದ್ದರು. ಜಮಾತೇ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಂ ಯು. ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ನೆರೆದಿದ್ದವರಿಗೆ ಮುಸ್ಸಂಜೆ ಲಘು ಫಲಾಹಾರದ ಇಫ್ತಾರ್ ವ್ಯವಸ್ಥೆ ಮಾಡಲಾಗಿತ್ತು, ಸಂಘಟನೆಯ ಸ್ಥಳೀಯ ಪ್ರಮುಖ ಜಿ.ಹೆಚ್. ಮೊಹಮದ್ ಹನೀಫ್ ಅವರು ಸ್ವಾಗತ ಭಾಷಣ ಮಾಡಿದರು. ಮಸೀದಿಯ ಗುರು ಉಮ್ಮರ್ ಮೌಲವಿ ಖಿರಾತ್ ಪಠಿಸಿದರು. ಅಬ್ದುಲ್ಲ ಮಡಿಕೇರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.