ಕುಶಾಲನಗರ, ಮೇ 23: ಕುಶಾಲನಗರ ಸಮೀಪದ ದುಬಾರೆ ವ್ಯಾಪ್ತಿಯಲ್ಲಿ ಬುಧವಾರ ಸುರಿದ ಭಾರೀ ಗಾಳಿ ಮಳೆಗೆ ಮರದ ಕೆಳಗೆ ಆಶ್ರಯ ಪಡೆದಿದ್ದ ವ್ಯಕ್ತಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಭಾರೀ ಗಾಳಿ, ಮಳೆ ಸಂದರ್ಭ ಪ್ರವಾಸಕ್ಕೆಂದು ದುಬಾರೆಗೆ ಆಗಮಿಸಿದ್ದ ಆಂದ್ರಪ್ರದೇಶ ಮೂಲದ ಕಾರು ಚಾಲಕ ಕಾವೇರಿ ನದಿ ತಟದಲ್ಲಿರುವ ಬೃಹತ್ ಮಾವಿನ ಮರದ ಕೆಳಗೆ ಅಶ್ರಯ ಪಡೆದಿದ್ದ. ಜೋರಾಗಿ ಬೀಸಿದ ಗಾಳಿಗೆ ಮಾವಿನ ಮರದ ಬೃಹತ್ ಕೊಂಬೆ ನೆಲಕ್ಕೆ ಉರುಳಿ ಬಿದ್ದಿದೆ. ಈ ಸಂದರ್ಭ ಮರದ ಕೆಳಗಿದ್ದ ಚಾಲಕನ ಮೈಮೇಲೆ ಬೀಳುತ್ತಿದ್ದ ಕೊಂಬೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ಈ ನಡುವೆ ಮರದ ಕೆಳಗೆ ನಿಲ್ಲಿಸಿದ್ದ ಎರಡು ಕಾರುಗಳ ನಡುವೆ ಕೊಂಬೆ ಮುರಿದು ಬಿದ್ದಿದ್ದು ಯಾವದೇ ರೀತಿಯ ಹಾನಿ ಸಂಭವಿಸದಿರುವದು ಆಶ್ಚರ್ಯದ ಸಂಗತಿ ಎನ್ನಬಹುದು.