*ಗೋಣಿಕೊಪ್ಪಲು, ಮೇ 23 : ಇಲ್ಲಿನ ಹೆಬ್ಬಾಲೆ ಬೇಡು ಹಬ್ಬ ಬುಡಕಟ್ಟು ಜನರ ನೃತ್ಯ ಬೈಗುಳದೊಂದಿಗೆ ವಿಜೃಂಭಣೆಯಿಂದ ನಡೆಯಿತು.

ದೇವರಪುರದ ಹೆಬ್ಬಾಲೆ ಗ್ರಾಮದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ ಅಂಗಳದಲ್ಲಿ ವೇಷದಾರಿಗಳು ವಿವಿಧ ವೇಷಗಳನ್ನು ತೊಟ್ಟು ಸೂರೆ ಬುರುಡೆಯ ಜಿಲಿ-ಜಿಲಿ ಬೋರ್ಗರೆತ ನಾದದೊಂದಿಗೆ ನೆರೆದ ಭಕ್ತಾದಿಗಳಿಗೆ ವಾಚಮ ಗೋಚರವಾಗಿ ಬಯ್ಯುತ್ತಾ ಭಕ್ತರಿಗೆ ರಂಜನೆ ನೀಡಿದರು.

ಸೊಪ್ಪು, ಹರಿದ ಬಟ್ಟೆ, ಕರಡಿ ವೇಷ, ಸ್ತ್ರೀ ರೂಪಧಾರಿಗಳು ಉದ್ದಕೂದಲು, ತುಂಡುಡುಗೆ, ಫ್ಯಾಶನ್ ವೇಷಧಾರಿಗಳು ಇಂತಹ ಮುಖವಾಡ ಹಾಕಿಕೊಂಡು ಗಂಡಸರು ಸ್ತ್ರೀಯರ ಉಡುಪುಗಳನ್ನು ಧರಿಸಿಕೊಂಡು ಹುಡುಗಿಯರಂತೆ ಕಾಣಿಸಿಕೊಂಡು ಆದಿವಾಸಿಗಳು ಡೋಲು ಬಡಿತಕ್ಕೆ ಸರಿಯಾಗಿ ತಾಳ ಹಾಕಿಕೊಂಡು ಕುಣಿಯುವ ಪರಿ ಎಂತಹವರ ಮನಸ್ಸನ್ನು ಮುದಗೊಳಿಸುವಂತಿತ್ತು.

ಗೋಣಿಕೊಪ್ಪಲು, ತಿತಿಮತಿ, ಬಾಳೆಲೆ, ಪಾಲಿಬೆಟ್ಟ, ಪೆÇನ್ನಂಪೇಟೆ, ಸಿದ್ದಾಪುರ, ಕುಶಾಲನಗರ, ವೀರಾಜಪೇಟೆ, ಪಿರಿಯಾಪಟ್ಟಣ ಸೇರಿದಂತೆ ಹಲವು ಪಟ್ಟಣಗಳಲ್ಲಿ ವೇಷಧಾರಿಗಳು ಸಾರ್ವಜನಿಕರಿಗೆ ಅಶ್ಲೀಲವಾಗಿ ಬಯ್ಯುತ್ತಾ ಕಾಣಿಕೆ ಬೇಡಿಕೆ ಇಟ್ಟರು.

ದಿನಂಪ್ರತಿ ದುಡಿಯುವ ದೇಹಗಳು ಇಂದು ಭಕ್ತಾದಿಗಳಿಗೆ ಮನರಂಜನೆ ನೀಡಿ ತಾವೂ ಸಂಭ್ರಮಿಸಿದರು. ಮನತುಂಬ ಬೈಗುಳದ ಸುರಿಮಳೆ ಎರೆದು ನಂತರ ಕೋಪಿಸಿಕೊಳ್ಳದಂತೆ ಮನವೊಲಿಸಿ ತಮ್ಮ ಉತ್ತಮ ಭಾವನೆಯನ್ನು ತೋರ್ಪಡಿಸಿದರು.

ಆದಿವಾಸಿಗಳ ವಿಭಿನ್ನ ವೇಷಧಾರಿಯ ಬೇಡುಹಬ್ಬದಲ್ಲಿ ಎರಡು ಸಾವಿರಕ್ಕೂ ಹೆಚ್ಚು ವೇಷಧಾರಿಗಳು ವಿವಿಧ ವೇಷಧರಿಸುವ ಮೂಲಕ ದ.ಕೊಡಗಿನಲ್ಲಿ ಸಂಭ್ರಮಕ್ಕೆ ಕಾರಣರಾದರು.

ಪ್ರತಿ ವರ್ಷ ಆಚರಿಸಿಕೊಂಡು ಬರುವ ದೇವರಪುರ ಹೆಬ್ಬಾಲೆ ಬೇಡುಹಬ್ಬದಲ್ಲಿ ಸಾವಿರಾರು ಆದಿವಾಸಿಗಳು ನಾನಾ ತರಹದ ವೇಷಭೂಷಣದಿಂದ ಜನರನ್ನು ಆಕರ್ಷಿಸಿದರು. ತಮ್ಮದೇ ಆದ ವೇಷಭೂಷಣದಿಂದ ಜನರನ್ನು ಆಕರ್ಷಿಸಿ ಬೈಗುಳದ ಮೂಲಕ ಹಣ ಪಡೆಯುವದು ಇದರ ಉದ್ದೇಶ.

ವೇಷಧಾರಿಗಳು ಬೇಡುವಾಗ ಕೆಲವೊಂದು ಅಶ್ಲೀಲ ಪದಗಳನ್ನು ಬಳಸಿ ಬೇಡುತ್ತಾರೆ. ಪದಗಳನ್ನು ಕೇಳಿ ನಾಚಿಗೆ ಪಟ್ಟವರು ಇವರಿಗೆ ಬೇಗ ಹಣ ನೀಡಿ ಕಳುಹಿಸಲು ಪ್ರಯತ್ನಿಸುತ್ತಾರೆ. ಇದನ್ನೇ ಅಸ್ತ್ರವಾಗಿ ಬಳಸುವ ವೇಷಧಾರಿಗಳು ಹೆಚ್ಚಾಗಿ ಹಣ ಸಂಪಾದಿಸುತ್ತಾರೆ. ವೇಷ ಹಲವು ಆದರೆ ಬೈಗುಳ ಹಾಗೂ ಬೇಡುವ ಪರಿ ಒಂದೇ ಆಗಿತ್ತು.

ಕಾಡಿನಲ್ಲಿ ವಾಸವಿರುವ ಆದಿವಾಸಿಗಳು ಇಂದು ಕೂಡ ತಮ್ಮ ವೇಷಭೂಷಣವನ್ನು ಕಾಡಿನಲ್ಲಿ ಪ್ರಾಕೃತಿಕವಾಗಿ ಸಿಗುವ ವಸ್ತುಗಳಿಂದಲೇ ವಿಭಿನ್ನವಾಗಿ ತೋರಿಸಿಕೊಂಡು ಸಂಭ್ರಮಿಸುತ್ತಾರೆ. ಇಂದು ತಾಂತ್ರಿಕವಾಗಿ ಮುಂದುವರೆದಿರುವ ಇವರು ಕಾಲಕ್ಕೆ ತಕ್ಕಂತೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವ್ಯಕ್ತಿಗಳಾಗಿ ವೇಷಭೂಷಣ ಮಾಡಿಕೊಂಡು ಜನರಿಂದ ಆಕರ್ಷಿತರಾದರು.

ಹರಕೆ ಸಲ್ಲಿಕೆ

ದೇವರಪುರದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಮಧ್ಯಾಹ್ನ 2.30 ಗಂಟೆಗೆ ಎಲ್ಲಾ ವೇಷಧಾರಿಗಳು ಸೇರಿ ದೇವರ ಸನ್ನಿಧಿಯಲ್ಲಿ ಹಾಡುತ್ತಾ, ಕುಣಿಯುತ್ತಾ ತಮ್ಮ ಹರಕೆಯನ್ನು ಸಲ್ಲಿಸಿದರು. ಈ ಸಂದರ್ಭ 4 ಸಾವಿರಕ್ಕೂ ಅಧಿಕ ಭಕ್ತಾದಿಗಳು ದೂರ- ದೂರದ ಊರಿನಿಂದ ಬಂದು ಸೇರಿದ್ದರು.

ಇದಕ್ಕೂ ಮೊದಲು ಅಲ್ಲಿನ ಅಂಬಲದಿಂದ ಭದ್ರಕಾಳಿ ದೇವರು ವ್ಯಕ್ತಿಯ ಮೈ ಮೇಲೆ ಬಂದು ಹಬ್ಬದಲ್ಲಿ ಪಾಲ್ಗೊಂಡಿತು. ಇದರೊಂದಿಗೆ ಪಣಿಕ ಜನಾಂಗದ ಇಬ್ಬರು ವ್ಯಕ್ತಿಯರು ದೇವರ ಮೊಗವನ್ನು ತೆಗೆದುಕೊಂಡು ಕುದುರೆಯೊಂದಿಗೆ ಅಯ್ಯಪ್ಪ ದೇವರ ದೇವಸ್ಥಾನದತ್ತ ತೆರಳಿದರು. ಇಬ್ಬರು ಕುದುರೆ ಹೊತ್ತ ಯುವಕರು ಹಾಗೂ ಭಂಡಾರ ಪೆಟ್ಟಿಗೆ ಹೊತ್ತ ತಕ್ಕ ಮುಖ್ಯಸ್ಥರು ತೆರಳಿದರು. -ಚಿತ್ರ ವರದಿ: ಎನ್.ಎನ್. ದಿನೇಶ್