ಸೋಮವಾರಪೇಟೆ, ಮೇ 23: ಕೃಷಿಕರು ತಮ್ಮ ಕೃಷಿ ಜಮೀನಿನಲ್ಲಿ ವೈಜ್ಞಾನಿಕವಾಗಿ ನೀರಾವರಿ ವ್ಯವಸ್ಥೆ ಮತ್ತು ಮಣ್ಣು ಪರೀಕ್ಷೆಗಳನ್ನು ಮಾಡಿಸುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯುವಂತಾಗಬೇಕು ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರಭಾಕರ್ ಅಭಿಪ್ರಾಯಿಸಿದರು.

ಇಲ್ಲಿನ ಗೌಡ ಸಮಾಜದಲ್ಲಿ ಆಯೋಜಿಸಲಾಗಿದ್ದ ಪುಷ್ಪಗಿರಿ ತೋಟಗಾರಿಕಾ ರೈತ ಉತ್ಪಾದಕರ ಸಂಸ್ಥೆಯ ಉದ್ಘಾಟನೆ ಮತ್ತು ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲಿಯವರೆಗೆ ರೈತರು ತಾವು ಬೆಳೆದ ಕೃಷಿ ಬೆಳೆಗಳಿಗೆ ಬೆಲೆ ನಿಗದಿ ಪಡಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ರೈತರ ಬದುಕು ಹಸನಾಗುವದಿಲ್ಲ. ಕೃಷಿಕರ ಪದಾರ್ಥಗಳನ್ನು ಸಂಗ್ರಹಿಸಲು ಶೀತಲೀಕರಣ ಗೋದಾಮುಗಳನ್ನು ಒದಗಿಸಲು ಸರ್ಕಾರವೂ ಮುಂದಾಗಬೇಕು. ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕ ಎಂ.ಸಿ. ನಾಣಯ್ಯ ಮಾತನಾಡಿ, ನಬಾರ್ಡ್ ವತಿಯಿಂದ ರೈತರಿಗೆ ಲಭ್ಯವಿರುವ ಹಲವು ಸವಲತ್ತುಗಳ ಬಗ್ಗೆ ವಿವರಿಸಿದರಲ್ಲದೇ, ಸಹಾಯಧನವನ್ನು ಹೊಂದಿಕೊಳ್ಳುವ ಮೂಲಕ ರೈತರು ಕೃಷಿಯಲ್ಲಿ ಲಾಭ ಕಂಡುಕೊಳ್ಳಬೇಕು ಎಂದರು.

ಮಡಿಕೇರಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ವಿಜಯ ಅಂಗಡಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತ ಉತ್ಪಾದಕ ಸಂಸ್ಥೆಗಳು ತನ್ನ ಸದಸ್ಯರುಗಳ ಆಶೋತ್ತರಗಳನ್ನು ಈಡೇರಿಸುವಂತಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪಗಿರಿ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ದೇವಯ್ಯ ವಹಿಸಿದ್ದರು. ಸಂಸ್ಥೆಯ ಪ್ರಸಕ್ತ ಸಾಲಿನ ಕಾರ್ಯಚಟುವಟಿಕೆಗಳು, ಉದ್ದೇಶಗಳ ಬಗ್ಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅವರು ಸಭೆಯಲ್ಲಿ ಮಂಡಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬನ್ನಳ್ಳಿ ಸತೀಶ್, ಜಿ.ಎಂ. ಹೂವಯ್ಯ, ಕೆ.ಎಂ. ಕೃಷ್ಣಕುಮಾರ್, ರತೀಶ್, ಸುರೇಶ್, ಅಯ್ಯಣ್ಣ, ಸುಜಾತ, ಜವಾಹರ್, ಜೋಯಪ್ಪ, ಹೂವಯ್ಯ, ರಕ್ಷಿತ್ ಸೇರಿದಂತೆ ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.