ಆಲೂರುಸಿದ್ದಾಪುರ, ಮೇ 23: ಟ್ರ್ಯಾಕ್ಟರ್ ಮಗುಚಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಆಲೂರುಸಿದ್ದಾಪುರ ಸಮೀಪದ ಭುವಂಗಾಲ ಗ್ರಾಮದಲ್ಲಿ ನಡೆದಿದೆ. ಆಲೂರು ಸಿದ್ದಾಪುರ ಸಮೀಪದ ಕಡ್ಲೆಮಕ್ಕಿ ಗ್ರಾಮದ ಪ್ರಕಾಶ್ ಎಂಬವರ ಪುತ್ರ ನವೀನ್ (26) ಸಾವಿಗೀಡಾದವರು.

ಇಂದು ಭುವಂಗಾಲ ಗ್ರಾಮದ ತಿಮ್ಮಯ್ಯ ಅವರ ಗದ್ದೆಯನ್ನು ಉಳುಮೆ ಮಾಡಲು ನವೀನ್ ತೆರಳಿದ್ದರು. ಆಲೂರುಸಿದ್ದಾಪುರದ ಅಶೋಕ್ ಎಂಬವರಿಗೆ ಸೇರಿದ ಟ್ರ್ಯಾಕ್ಟರಿನಲ್ಲಿ ಚಾಲಕನಾಗಿ ಕೆಲಸಮಾಡುತ್ತಿದ್ದರು.

ಉಳುಮೆ ಮಾಡುವ ಸಂದರ್ಭದಲ್ಲಿ ಗದ್ದೆಯ ಬದಿಯಲ್ಲಿಯ ಗುಂಡಿಗೆ ಟ್ರ್ಯಾಕ್ಟರ್ ಬಿದ್ದುದ್ದರಿಂದ ಚಾಲಕ ನವೀನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.