ಒಡೆಯನಪುರ, ಮೇ 23: ‘ಧಾರ್ಮಿಕ ಸಂಸ್ಕಾರವಂತಿಕೆಯಿಂದ ಸಮಾಜ ಸನ್ಮಾರ್ಗದಲ್ಲಿ ಸಾಗಲು ಸಾಧ್ಯವಾಗುತ್ತದೆ’ ಎಂದು ಅರಕಲಗೂಡು ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಸುಜ್ಞಾನ ಪ್ರಭು ಪೀಠಾಧ್ಯಕ್ಷ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀ ಕಾಳಿಕಾಂಬ ದೇವಿಯ 4 ವರ್ಷದ ವಾರ್ಷಿಕೋತ್ಸವ, ಸಾಮೂಹಿಕ ಉಪನಯನ ಮತ್ತು ಸಾಮೂಹಿಕ ಕುಂಕುಮಾರ್ಚನೆ ಹಾಗೂ ಪೂಜಾ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಪೋಷಕರು ಮಕ್ಕಳು ಚಿಕ್ಕವರಿರುವಾಗಲೆ ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯ ಸಂಸ್ಕಾರವನ್ನು ಕಲಿಸಬೇಕೆಂದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವಸ್ವಾಮೀಜಿ ಮಾತನಾಡಿ-ಹಣ, ಆಸ್ತಿ ಸಂಪಾದನೆಗಿಂತ ದೇವರು ಹಾಗೂ ಆಧ್ಯಾತ್ಮಿಕದಲ್ಲಿರುವ ಭಕ್ತಿಯೆ ಮಹತ್ವದಾಗಿರುತ್ತದೆ ಎಂದರು. ಸಮಾಜ ಹಾಗೂ ಸಮುದಾಯದ ವರಲ್ಲಿ ಮನಸು ಒಂದಾಗಲು ಧಾರ್ಮಿಕ ಆಧ್ಯಾತ್ಮಿಕ ಕೇಂದ್ರಗಳನ್ನು ಕಟ್ಟುವ ಕೆಲಸ ಹೆಚ್ಚಾಗಬೇಕಾಗಿದೆ ಎಂದರು.
ದೇವಾಲಯ ಸಮಿತಿ ಅಧ್ಯಕ್ಷ ಲಕ್ಷ್ಮಣಚಾರ್ ಮಾತನಾಡಿ, ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಸಮುದಾಯದ ಕುಲ ಬಾಂಧವರ ಸಹಕಾರ ಮತ್ತು ಪ್ರೋತ್ಸಾಹದ ಅಗತ್ಯ ಇದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮುದಾಯದ ಪ್ರಮುಖರಾದ ಪುಟ್ಟಸ್ವಾಮಿ ಆಚಾರ್, ನ್ಯಾಯಾದೀಶ ನವಿನ್ಕುಮಾರ್, ವಿಶ್ವನಾಥ್ ಆಚಾರ್, ವೀರಶೈವ ಮಹಾ ಸಭಾದ ಜಿಲ್ಲಾಧ್ಯಕ್ಷ ಕೆ.ಬಿ. ಹಾಲಪ್ಪ, ಕಿರಿಕೊಡ್ಲಿ ಮಠದ ಪುರೋಹಿತ ಸೋಮಶೇಖರ್ ದೇವಾಲಯ ಸಮಿತಿ ಪದಾಧಿಕಾರಿಗಳು ಹಾಜರಿದ್ದರು. ದೇವಾಲಯ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.