ಬಳ್ಳಾರಿ : ಉಗ್ರಪ್ಪ ಮಣಿಸಿದ ದೇವೇಂದ್ರಪ್ಪ

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ನಡೆದಿದ್ದ ಉಪ ಚುನಾವಣೆಯಲ್ಲಿ ಪ್ರಚಂಡ ಬಹುಮತದ ಗೆಲವು ಸಾಧಿಸಿದ್ದ ಕಾಂಗ್ರೆಸ್‍ನ ನಾಯಕ ವಿ.ಎಸ್. ಉಗ್ರಪ್ಪ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಇಲ್ಲಿ ಬಿಜೆಪಿಯ ಅಭ್ಯರ್ಥಿ ದೇವೇಂದ್ರಪ್ಪ ಗೆಲವಿನ ನಗೆ ಬೀಡಿದ್ದಾರೆ.

ಕೋಲಾರ : ಮುನಿಸ್ವಾಮಿ ಗೆಲವು

ಈ ತನಕ 7 ಬಾರಿ ಸಂಸದರಾಗಿ ಆಯ್ಕೆಗೊಂಡಿದ್ದ ಕಾಂಗ್ರೆಸ್ ಕೆ.ಎಚ್. ಮುನಿಯಪ್ಪ ಅವರು ಈ ಬಾರಿ ಮುಗ್ಗರಿಸಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಅಭ್ಯರ್ಥಿ ಬಿ.ಬಿ.ಎಂ.ಪಿ. ಕಾರ್ಪೋರೇಟರ್ ಆಗಿದ್ದ ಮುನಿಸ್ವಾಮಿ ಅವರು ಮುನಿಯಪ್ಪ ವಿರುದ್ಧ ಗೆಲವಿನ ನಗೆ ಬೀರಿದ್ದಾರೆ.

ಹಾಸನ : ಯುವ ಪ್ರಜ್ವಲ್ ಸಂಸದ

ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದ್ದ ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಜೆಡಿಎಸ್‍ನ ಪ್ರಜ್ವಲ್ ರೇವಣ್ಣ ರಾಜ್ಯ ಮಾಜಿ ಸಚಿವರಾಗಿದ್ದ ಪ್ರತಿಸ್ಪರ್ಧಿ ಬಿಜೆಪಿಯ ಎ. ಮಂಜು ವಿರುದ್ಧ ಚೊಚ್ಚಲ ಸ್ಪರ್ಧೆಯಲ್ಲಿ 1.42 ಲಕ್ಷ ಮತಗಳಿಂದ ವಿಜಯ ಸಾಧಿಸಿದ್ದಾರೆ.

ಶಿವಮೊಗ್ಗ : ಬಿ.ವೈ. ರಾಘವೇಂದ್ರ ವಿಜಯ

ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ 1,44,000 ಮತಗಳಿಂದ ಮೈತ್ರಿ ಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಪರಾಭವಗೊಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ :

ಡಿ.ಕೆ. ಸುರೇಶ್ ಗೆಲವಿನ ಪತಾಕೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಅಶ್ವಥ್‍ನಾರಾಯಣ ಗೌಡ ಅವರ ವಿರುದ್ಧ ವಿಜಯ ಸಾಧಿಸಿದರು.

ಚಿಕ್ಕಬಳ್ಳಾಪುರ : ಕಮರಿದ ಮೊಯಿಲಿ ‘ಹ್ಯಾಟ್ರಿಕ್’ ಕನಸು : ಬಚ್ಚೇಗೌಡ ಗೆಲವು

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜ್ಯದ ಮಾಜಿ ಸಿ.ಎಂ. ಎಂ. ವೀರಪ್ಪ ಮೊಯಿಲಿ ಬಿಜೆಪಿಯ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಎದುರು ಪರಾಭವಗೊಂಡಿದ್ದಾರೆ. ಬಚ್ಚೇಗೌಡರ ಎದುರಿಸಿ ಸೋಲು ಕಾಣುವದರೊಂದಿಗೆ ವೀರಪ್ಪ ಮೊಯಿಲಿ ಅವರು ಮೂರನೇ ಬಾರಿಗೆ ಸಂಸದರಾಗುವ ಅವಕಾಶದಿಂದ ವಂಚಿತರಾದರು.

ಬೆಂಗಳೂರು ದಕ್ಷಿಣ :

ತೇಜಸ್ವಿಯ ವಿಜಯ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿಯಾಗಿ ಬಿಜೆಪಿಯ ಹುರಿಯಾಳಾಗಿದ್ದ ಯುವಕ ತೇಜಸ್ವಿ ಸೂರ್ಯ ಪ್ರಥಮ ಚುನಾವಣೆಯಲ್ಲಿ ವಿಜಯ ದುಂದುಬಿ ಮೊಳಗಿಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‍ನ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರಿಗಿಂತ 3.29 ಲಕ್ಷ ಹೆಚ್ಚು ಮತ ಪಡೆದು ತೇಜಸ್ವಿ ಲೋಕಸಭೆ ಪ್ರವೇಶಿಸಿದ್ದಾರೆ.

ಬೆಂಗಳೂರು ಉತ್ತರ :

ಗೌಡರ ಗೆಲವಿನ ಓಟ

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಕೇಂದ್ರ ಸಚಿವರಾಗಿದ್ದ ಕೊಡಗಿನ ಅಳಿಯ ಡಿ.ವಿ. ಸದಾನಂದಗೌಡ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಕೃಷ್ಣಭೈರೇಗೌಡ ಅವರನ್ನು ಸೋಲಿಸಿ ಮತ್ತೊಮ್ಮೆ ಲೋಕಸಭೆ ಪ್ರವೇಶಿಸಿದ್ದಾರೆ.

ಕೊಡಗು - ಮೈಸೂರು : ಸಿಂಹ ಪುನರಾಯ್ಕೆ

ಕೊಡಗು - ಮೈಸೂರು ಕ್ಷೇತ್ರದಲ್ಲಿ ಹಾಲಿ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರು ಪುನರಾಯ್ಕೆಯಾಗಿದ್ದಾರೆ. ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದ್ದು, ಕೆಲವು ಸಮೀಕ್ಷೆಗಳಿಂದಾಗಿ ಕುತೂಹಲ ಕೆರಳಿಸಿದ್ದ ಈ ಕ್ಷೇತ್ರದಲ್ಲಿ ಬಿಜೆಪಿಯ ಪ್ರತಾಪ್‍ಸಿಂಹ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅವರನ್ನು 1,38,647 ಮತಗಳಿಂದ ಪರಾಭವಗೊಳಿಸಿ ಎರಡನೆಯ ಬಾರಿಗೆ ಸಂಸದರಾಗಿ ಚುನಾಯಿತರಾಗಿದ್ದಾರೆ.

ಮಂಡ್ಯ : ಸುಮಲತಾಗೆ ಮಣೆ

ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಿ.ಎಂ. ಕುಮಾರಸ್ವಾಮಿ ಪುತ್ರ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಎದುರು ಪರಾವಭಗೊಂಡಿದ್ದಾರೆ. ಸುಮಲತಾ 1,25,382 ಮತಗಳಿಂದ ಜಯಗಳಿಸಿದರು.

ಉತ್ತರ ಕನ್ನಡ : ಅನಂತಕುಮಾರ್ ಹೆಗಡೆ ದಾಖಲೆ ಜಯ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ‘ಫಯರ್ ಬ್ರ್ಯಾಂಡ್’ ಎಂದೇ ಕರೆಯಲ್ಪಡುವ ಬಿಜೆಪಿಯ ಅಭ್ಯರ್ಥಿ ಅನಂತಕುಮಾರ್ ಹೆಗಡೆ ದಾಖಲೆಯ ಜಯಗಳಿಸಿದ್ದಾರೆ. ಅನಂತಕುಮಾರ್ ಹೆಗಡೆ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‍ನ ಆನಂದ್ ಆಸ್ನೋಟಿಕರ್ ವಿರುದ್ಧ 4.40 ಲಕ್ಷ ಮತಗಳಿಂದ ಜಯಭೇರಿ ಬಾರಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು :

ಶೋಭಾ ಕರಾಮತ್ತು

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಮಹಿಳಾ ನಾಯಕಿ ಶೋಭಾ ಕರಂದ್ಲಾಜೆ ಮತ್ತೊಮ್ಮೆ ಸಂಸತ್ ಪ್ರವೇಶಿಸಿದ್ದಾರೆ. ಶೋಭಾ ಕರಂದ್ಲಾಜೆ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಪ್ರಮೋದ್ ಮಧ್ವರಾಜ್ ಎದುರು 3,44,606 ಮತಗಳಿಂದ ಜಯಗಳಿಸಿದ್ದಾರೆ.

ತುಮಕೂರು : ಬಸವರಾಜು ದೆಹಲಿಗೆ

ರಾಜ್ಯ ಮತ್ತೊಂದು ಪ್ರತಿಷ್ಠೆಯ ಕ್ಷೇತ್ರವಾಗಿದ್ದ ತುಮಕೂರಿನಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು ಅವರು ಜೆಡಿಎಸ್‍ನ ಧುರೀಣ ಮೈತ್ರಿ ಕೂಟದ ಪ್ರಭಾವಿ ಅಭ್ಯರ್ಥಿಯಾಗಿದ್ದ ದೇಶದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಮಣಿಸಿ ಸಂಸತ್ ಪ್ರವೇಶಿಸಿದ್ದಾರೆ. ಬಸವರಾಜು ಅವರು ದೇವೇಗೌಡರ ಎದುರು 14,607 ಮತಗಳಿಂದ ಜಯಶೀಲರಾಗಿದ್ದಾರೆ.

ಧಾರವಾಡ : ಪ್ರಹ್ಲಾದ್ ಜೋಶಿ

ಧಾರವಾಡ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರು ವಿಜಯಶಾಲಿಯಾಗಿದ್ದಾರೆ. ಜೋಶಿ ಅವರು ತಮ್ಮ ಪ್ರತಿಸ್ಪರ್ಧಿ ವಿನಯಕುಲಕರ್ಣಿ ಎದುರು ಜಯ ಸಾಧಿಸಿದ್ದಾರೆ.

ಬೆಂಗಳೂರು ಕೇಂದ್ರ : ಪಿ.ಸಿ. ಮೋಹನ್

ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿದ್ದ ಪಿ.ಸಿ. ಮೋಹನ್ ಅವರು ಜಯಭೇರಿ ಬಾರಿಸಿದ್ದಾರೆ. ಇವರು ಪ್ರತಿಸ್ಪರ್ಧಿ ಕಾಂಗ್ರೆಸ್‍ನ ರಿಜ್ವಾನ್ ಹರ್ಷದ್ ಅವರನ್ನು ಕೊನೆ ಹಂತದಲ್ಲಿ ಪರಾಜಿತಗೊಳಿಸಿದ್ದಾರೆ.

ದಾವಣಗೆರೆ : ಜಿ.ಎಂ. ಸಿದ್ದೇಶ್ವರ್

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಅವರು ಚುನಾಯಿತರಾಗಿದ್ದಾರೆ. ಇವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಮಂಜಪ್ಪ ಅವರನ್ನು ಹಿಂದಿಕ್ಕಿದ್ದಾರೆ.

ಬಾಗಲಕೋಟೆ : ಪಿ.ಸಿ. ಗದ್ದಿಗೌಡರ್

ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿಯ ಪಿ.ಸಿ. ಗದ್ದಿಗೌಡರ್ ಕಾಂಗ್ರೆಸ್‍ನ ವೀಣಾ ಕಾಶಪ್ಪನವರ್ ಅವರನ್ನು ಪರಾಜಿತಗೊಳಿಸಿದ್ದಾರೆ.

ಬೀದರ್ : ಈಶ್ವರ ವಿರುದ್ಧ ಭಗವಂತ ಜಯ

ಬೀದರ್ ಕ್ಷೇತ್ರದಲ್ಲಿ ಬಿಜೆಪಿಯ ಹುರಿಯಾಳು ಭಗವಂತ ಖೂಬಾ ಅವರು ಪ್ರತಿಸ್ಪರ್ಧಿಯಾಗಿದ್ದ ಕೆಪಿಸಿಸಿಯ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ.

ವಿಜಯಪುರ : ರಮೇಶ್ ಜಿಗಜಿಣಗಿ

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರು ತಮ್ಮ ಸನಿಹದ ಪ್ರತಿಸ್ಪರ್ಧಿಯಾಗಿದ್ದ ಸುನಿತಾ ರೇವಾನಂದ್ ಚವಾಣ್ ಅವರನ್ನು ಹಿಂದಿಕ್ಕಿದ್ದಾರೆ. ಜಿಗಜಿಣಗಿ ಅವರು 2,56,526 ಮತಗಳ ಅಂತರದ ಜಯಸಾಧಿಸಿ ಗಮನ ಸೆಳೆದಿದ್ದಾರೆ.

ಚಿಕ್ಕೋಡಿ : ಅಣ್ಣಾ ಸಾಹೇಬ್ ಜೊಲ್ಲೆ

ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಅವರು ವಿಜಯಶಾಲಿಯಾಗಿದ್ದಾರೆ. ಇವರು ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಪ್ರಕಾಶ್ ಹುಕ್ಕೇರಿ ಅವರನ್ನು 1.15 ಲಕ್ಷ ಮತಗಳಿಂದ ಪರಾಭವಗೊಳಿಸಿದ್ದಾರೆ.

ಕೊಪ್ಪಳ : ಸಂಗಣ್ಣ ಕರಡಿಗೆ ಮಣೆ

ಕೊಪ್ಪಳ ಕ್ಷೇತ್ರದಲ್ಲಿ ಮತದಾರರು ಬಿಜೆಪಿಯ ಅಭ್ಯರ್ಥಿ ಸಂಗಣ್ಣ ಕರಡಿ ಅವರಿಗೆ ಮಣೆ ಹಾಕಿದ್ದಾರೆ. ಸಂಗಣ್ಣ ಕರಡಿ ಅವರು ತಮ್ಮ ಎದುರಾಳಿಯಾಗಿದ್ದ ರಾಜಶೇಖರ ಹಿಟ್ನಾಳ ಎದುರು 38,397 ಮತಗಳಿಂದ ಜಯಗಳಿಸಿದ್ದಾರೆ.

ಬೆಳಗಾವಿ : ಸುರೇಶ್ ಅಂಗಡಿ

ಬೆಳಗಾವಿ ಕ್ಷೇತ್ರದಲ್ಲಿ ಸುರೇಶ್ ಅಂಗಡಿ ಅವರು ವಿಜಯಶಾಲಿಯಾಗಿದ್ದಾರೆ. ಇವರು ತಮ್ಮ ಪ್ರತಿಸ್ಪರ್ಧಿ ವಿ.ಎಸ್. ಸಾಧುನವರ್ ಅವರನ್ನು 1.73 ಲಕ್ಷ ಮತಗಳಿಂದ ಹಿಂದಿಕ್ಕಿದ್ದಾರೆ.

ಹಾವೇರಿ : ಶಿವಕುಮಾರ್ ಉದಾಸಿ

ಹಾವೇರಿ ಲೋಕಸಭಾ ಕ್ಷೇತ್ರವು ಬಿಜೆಪಿಯ ಪಾಲಾಗಿದೆ. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಅವರು ತಮ್ಮ ಎದುರಾಳಿಯಾಗಿದ್ದ ಡಿ.ಆರ್. ಪಾಟೀಲ್ ಅವರನ್ನು ಪರಾಜಿತಗೊಳಿಸಿದ್ದಾರೆ.

ದಕ್ಷಿಣ ಕನ್ನಡ : ನಳಿನ್‍ಕುಮಾರ್ ಕಟೀಲ್ ಆಯ್ಕೆ

ದಕ್ಷಿಣ ಕನ್ನಡ ಕ್ಷೇತ್ರದಿಂದ ಕಳೆದ ಬಾರಿಯೂ ಸಂಸದರಾಗಿದ್ದ ಬಿಜೆಪಿಯ ನಳಿನ್‍ಕುಮಾರ್ ಕಟೀಲ್ ಅವರು ವಿಜಯಶಾಲಿಯಾಗಿದ್ದಾರೆ. ಇವರು ತಮ್ಮ ಎದುರಾಳಿಯಾಗಿದ್ದ ಮಿಥುನ್ ರೈ ಅವರ ವಿರುದ್ಧ 2.74 ಲಕ್ಷ ಮತಗಳಿಂದ ಜಯಗಳಿಸಿದ್ದಾರೆ.

ಕಲಬುರಗಿ : ಜಾದವ್ ಜಾದು

ಕಲಬುರಗಿ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎನಿಸಿದ್ದ ಕಾಂಗ್ರೆಸ್‍ನ ಪ್ರಭಾವಿ ನಾಯಕ ಕಳೆದ ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಪರಾಭವಗೊಂಡಿದ್ದಾರೆ. ಇಲ್ಲಿ ಬಿಜೆಪಿಯ ಉಮೇಶ್ ಜಾಧವ್ ಅವರು 1,01,333 ಹೆಚ್ಚು ಮತಗಳಿಂದ ವಿಜಯಮಾಲೆ ಧರಿಸಿದ್ದಾರೆ.

ರಾಯಚೂರು : ರಾಜಾ ಅಮರೇಶ್ ನಾಯಕ್

ರಾಯಚೂರು ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ರಾಜಾ ಅಮರೇಶ್ ನಾಯಕ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಬಿ.ವಿ. ನಾಯಕ್ ಅವರನ್ನು ಸೋಲಿಸಿದ್ದಾರೆ.

ಚಿತ್ರದುರ್ಗ : ನಾರಾಯಣಸ್ವಾಮಿ

ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ನಾರಾಯಣ ಸ್ವಾಮಿ ಜಯಗಳಿಸಿದ್ದಾರೆ. ಇವರು ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಬಿ.ಎನ್. ಚಂದ್ರಪ್ಪ ಅವರನ್ನು ಮಣಿಸಿದ್ದಾರೆ.

ಚಾಮರಾಜನಗರ : ಶ್ರೀನಿವಾಸ್ ಪ್ರಸಾದ್ ಅದೃಷ್ಟಶಾಲಿ

ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವರು ವಿಜಯಶಾಲಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಅಭ್ಯರ್ಥಿ ಧ್ರುವನಾರಾಯಣ ಕೊನೆಯ ಕ್ಷಣದವರೆಗೂ ಮುಂದಿದ್ದರು. ಆದರೆ ಅಂತಿಮ ಹಂತದಲ್ಲಿ ಫಲಿತಾಂಶ ಏರಿಳಿತವಾಗಿ ಶ್ರೀನಿವಾಸ್ ಪ್ರಸಾದ್ 1806 ಮತಗಳಿಂದ ಜಯಗಳಿಸಿದ್ದಾರೆ.

ಸೆರಗೊಡ್ಡಿದ ನಾರಿಗೆ ಮತ ಭಿಕ್ಷೆಯಿತ್ತ ಮಂಡ್ಯ

ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ‘ಹೈವೋಲ್ಟೇಜ್’ ಕ್ಷೇತ್ರವಾಗಿ ಗಮನ ಸೆಳೆದಿದ್ದು, ರಾಜ್ಯ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಇಲ್ಲಿ ಸ್ಪರ್ಧಿಸಿದ್ದರೆ, ಇವರ ವಿರುದ್ಧ ಪಕ್ಷೇತರರಾಗಿ ಸುಮಲತಾ ಅಂಬರೀಶ್ ಸೆಡ್ಡು ಹೊಡೆದು ನಿಂತಿದ್ದರು. ಭಾರೀ ಜಿದ್ದಾಜಿದ್ದಿನಿಂದ ಇಲ್ಲಿ ಮತಸಮರ ನಡೆದಿದ್ದು, ಫಲಿತಾಂಶ ಕಲ್ಪನಾತೀತವಾಗಿತ್ತು. ಈ ಹಿನ್ನೆಲೆಯಲ್ಲಿ ದೇಶದ ಫಲಿತಾಂಶದೊಂದಿಗೆ ಎಲ್ಲರ ಚಿತ್ತವೂ ಮಂಡ್ಯ ಕ್ಷೇತ್ರದತ್ತ ನೆಟ್ಟಿತ್ತು.

ಆರಂಭದಿಂದಲೂ ಹಾವು-ಏಣಿ ಆಟ... ಒಮ್ಮೆ ನಿಖಿಲ್‍ಗೆ ಮುನ್ನಡೆ ಮತ್ತೊಮ್ಮೆ ಸುಮಲತಾಗೆ ಮುನ್ನಡೆ ಈ ರೀತಿಯಾದ ಏರಿಳಿತದಿಂದಾಗಿ ಹಲವು ಸುತ್ತಿನ ಮತ ಎಣಿಕೆ ತನಕ ಎಲ್ಲರೂ ಉಸಿರು ಬಿಗಿ ಹಿಡಿದು ಕಾಯುವಂತಾಗಿತ್ತು. ಎರಡಂಕಿ, ಮೂರಂಕಿಯ ಅಂತರದಿಂದಾಗಿ ಕುತೂಹಲ ಹೆಚ್ಚಾಗಿತ್ತು. ಆದರೆ ಹೊತ್ತು ಸರಿಯುತ್ತಿದ್ದಂತೆಯೇ ಸುಮಲತಾ ಅಂಬರೀಷ್ ಪುಟಿದೇಳಲಾರಂಭಿಸಿದರು. ಅವರು ಗಳಿಸಿದ ಮತಗಳ ಅಂತರ ಹೆಚ್ಚಾಗತೊಡಗಿ ಅವರ ಬೆಂಬಲಿಗರಲ್ಲಿ ಹರ್ಷದ ಹೊನಲು ಕಾಣಲಾರಂಭಿಸಿತು.

ಅಂತಿಮವಾಗಿ ಸುಮಲತಾ 1,28,725 ಮತ ಅಂತರದಲ್ಲಿ ಗೆಲವು ಸಾಧಿಸಿ ಮಂಡ್ಯ... ಮಂಡ್ಯ... ಮಂಡ್ಯ ಎಂಬ ಕೌತುಕಕ್ಕೆ ತೆರೆಬಿತ್ತು.

ಬಿ.ಜೆ.ಪಿ. ಕಾರ್ಯಕರ್ತರ ಮುಗಿಲು ಮುಟ್ಟಿದ ಸಂಭ್ರಮ-ಸಂಜೆ ಆರ್ಭಟ

ಮೈಸೂರು, ಮೇ 23: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ, ಹಾಲಿ ಸಂಸದರಾದ ಪ್ರತಾಪ್ ಸಿಂಹ ಅವರ ಗೆಲವು ಖಚಿತಗೊಳ್ಳುತ್ತಿದ್ದಂತೆ ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು.

ಇಂದು ಬೆಳಿಗ್ಗೆಯಿಂದಲೇ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯುತ್ತಿದ್ದ ಮೈಸೂರಿನ ಪಡುವಾರಳ್ಳಿಯ ವಾಲ್ಮಿಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಬಳಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿ.ಜೆ.ಪಿ. ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತೀ ಸುತ್ತಿನ ಚುನಾವಣಾ ಪಲಿತಾಂಶ ಹೊರಬೀಳುತ್ತಿದ್ದಂತೆಯೇ ಜೈಕಾರ ಮೊಳಗಿಸುತ್ತಿದ್ದರು. ಕಾಂಗ್ರೆಸ್- ಜೆ.ಡಿ.ಎಸ್. ಮೈತ್ರಿ ಪಕ್ಷದ ಅಭ್ಯರ್ಥಿ ಮತ್ತು ಆ ಪಕ್ಷಗಳ ಬೆಂಬಲಿಗರು ಆತಂಕದ ಛಾಯೆಯೊಂದಿಗೆ ಸ್ಥಳದಿಂದ ನಿರ್ಗಮಿಸುತ್ತಿದ್ದ ಸನ್ನಿವೇಶ ಎದುರಾಯಿತು.

ಇತ್ತ ಬಿ.ಜೆ.ಪಿ.ಯ ಕೊಡಗು-ಮೈಸೂರು ಜಿಲ್ಲೆಗಳ ಮುಖಂಡರು, ಜನಪ್ರತಿನಿಧಿಗಳು ಸೇರಿದಂತೆ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗತೊಡಗಿತು.

ವಾದ್ಯಗೋಷ್ಠಿಯ ನಡುವೆ ಮತ ಎಣಿಕೆ ಕೇಂದ್ರದ ಹೊರವಲಯದಲ್ಲಿ ಕಾರ್ಯಕರ್ತರು ಪಕ್ಷದ ಗೆಲವಿನಿಂದ ಹರ್ಷಗೊಂಡು ಕುಣಿಯುತ್ತಿದ್ದ ದೃಶ್ಯವು ಕಂಡುಬಂತು. ಬಿ.ಜೆ.ಪಿ.ಯ ಶಾಸಕರುಗಳಾದ ಎಂ.ಪಿ. ಅಪ್ಪಚುರಂಜನ್, ಕೆ.ಜಿ.ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ ಸಹಿತ ಪಕ್ಷದ ಜಿಲ್ಲಾ ಹಾಗೂ ತಾಲೂಕು ಸೇರಿದಂತೆ ಇತರ ಘಟಕದ ಪದಾಧಿಕಾರಿಗಳು ಪ್ರತಾಪ್ ಸಿಂಹ ಅವರ ಗೆಲವಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು.

ನಾಲ್ಕು ನಿಟ್ಟಿನಿಂದ ಮತ ಎಣಿಕೆ ಕೇಂದ್ರದ ಹೊರಗಿನ ರಸ್ತೆಗಳಲ್ಲಿ ಕಾಣಿಸಿಕೊಂಡ ಬಿ.ಜೆ.ಪಿ.ಕಾರ್ಯಕರ್ತರ ಉದ್ಘೋಷ ಮುಗಿಲು ಮುಟ್ಟಿದರೆ, ಕಾನೂನು- ಸುವ್ಯವಸ್ಥೆ ಕಾಪಾಡುವತ್ತ ಪೊಲೀಸ್ ಇಲಾಖೆ ಹರ ಸಾಹಸ ಪಡುತ್ತಿತ್ತು. ಸಂಸದ ಪ್ರತಾಪ್ ಸಿಂಹ ಅವರು ಮಾತ್ರ ಆಗಿಂದ್ದಾಗೆ ಮಾಧ್ಯಮ ಕೇಂದ್ರ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು.

ಸಂಜೆ 5 ಗಂಟೆಯಾದರು ನಿಖರವಾದ ಫಲಿತಾಂಶದ ಕುರಿತು ಸ್ಪಷ್ಟ ಮಾಹಿತಿ ಹೊರಬೀಳಲಿಲ್ಲ. ಹೀಗಾಗಿ ಮಾದ್ಯಮ ಬಳಗ ಸೂಕ್ತ ಮಾಹಿತಿಗಾಗಿ ಅನಿವಾರ್ಯವೆಂಬಂತೆ ಮಾದ್ಯಮ ಕೇಂದ್ರದಲ್ಲಿ ಕಾಯಬೇಕಾಯಿತು.

ಮತ ಎಣಿಕೆ ಮುಗಿಯುತ್ತಿದ್ದಂತೆ ಮೈಸೂರಿನಲ್ಲಿ ಗುಡುಗು ಸಹಿತ ಧಾರಕಾರ ಮಳೆ ಸುರಿಯುವ ಮೂಲಕ ಬಿ.ಜೆ.ಪಿ. ಕಾರ್ಯಕರ್ತರ ವಿಜಯೋತ್ಸವಕ್ಕೆ ತಣ್ಣೀರು ಎರಚಿತು.

ಮಾದ್ಯಮ ಕೇಂದ್ರದಲ್ಲಿ ಮಾಹಿತಿ ಬಿತ್ತರಿಸುತ್ತಿದ್ದ ಪರದೆ ಹಾಗೂ ಟಿ.ವಿ. ಕೂಡ ಕೈಕೊಡುವದರೊಂದಿಗೆ ಅಂತಿಮ ಕ್ಷಣದ ಪೂರ್ಣ ಮಾಹಿತಿಗೆ ಪರದಾಡುವಂತಾಯಿತು.

ಮತ ಎಣಿಕೆ ಕೇಂದ್ರದ ಹೆಚ್ಚುವರಿ ಸಿಬ್ಬಂದಿ ಮಾತ್ರ ಯಾವದಕ್ಕೂ ತಲೆ ಕೆಡಿಸಿಕೊಳ್ಳದೆ ಖಾಲಿ ಪೆಟ್ಟಿಗೆಗಳಲ್ಲಿ ಮತಯಂತ್ರಗಳನ್ನು ತುಂಬಿಸಿಡುತ್ತಿದ್ದ ಚಿತ್ರಣ ಕಣ್ಣಿಗೆ ಬಿತ್ತು. ದಿಢೀರನೇ ಸುರಿದ ಮಳೆಯಿಂದಾಗಿ ಮತ ಎಣಿಕೆ ಕೇಂದ್ರದ ಹೊರಾಂಗಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಹಾಗೂ ಇತರ ಸಿಬ್ಬಂದಿ ಪರದಾಡುವಂತಾಯಿತು.

ಕೈಕೊಟ್ಟ ಮೈತ್ರಿ: ಸಿ.ಎಚ್. ವಿಜಯಶಂಕರ್

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅವರು ತಮಗೆ ಹಿನ್ನೆಡೆಯಾದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಮೈತ್ರಿ ಪಕ್ಷದವರು ಸರಿಯಾಗಿ ಚುನಾವಣೆಯಲ್ಲಿ ಸಹಕರಿಸದೆ ಕೈಕೊಟ್ಟಿದ್ದರಿಂದ ಸೋಲು ಉಂಟಾಗಿದೆ ಎಂದು ಬೇಸರದಿಂದ ನುಡಿದರು. ಮುಖ್ಯವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಾಗೂ ಇನ್ನು ಕೆಲವೆಡೆ ಮೈತ್ರಿ ಪಕ್ಷದವರು ಅನ್ಯಾಯವೆಸಗಿದ್ದು ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರುವದಾಗಿ ಹೇಳಿದರು.

ತಮಗೆ ಉಭಯ ಪಕ್ಷದಿಂದ ಮತಗಳು ಲಭಿಸಿದರೆ ಗೆಲವು ಸಾಧ್ಯವಿತ್ತು ಎಂದು ಸಮರ್ಥನೆ ನೀಡಿದ್ದಾರೆ.ಅಂದು ವಾಜಪೇಯಿ ಹೇಳಿದ್ದರು...

‘ಕಾಂಗ್ರೆಸ್ಸಿಗರೇ, ನಾನಿಂದು ವಿರೋಧ ಪಕ್ಷದಲ್ಲಿದ್ದೇನೆಂದು ನನ್ನನ್ನು ಅಪಹಾಸ್ಯ ಮಾಡುತ್ತಿದ್ದೀರಿ. ಮುಂದೊಂದು ದಿನ ಬರಲಿದೆ, ರಾಷ್ಟ್ರದ ಮೂಲೆ ಮೂಲೆಯಲ್ಲಿಯೂ ಕಮಲ ಅರಳಿ ನಿಲ್ಲಲಿದೆ. ನನ್ನ ಸ್ಥಾನದಲ್ಲಿ ನೀವು ನಿಲ್ಲಲಿದ್ದೀರಿ ಅಂದು ಇಡೀ ರಾಷ್ಟ್ರ ನಿಮ್ಮನ್ನು ನೋಡಿ ನಗಲಿದೆ’

-ಸಂಸತ್‍ನಲ್ಲಿ ಮಾಜೀ ಪ್ರಧಾನಿಯ ಮಾತಿನ ಮೆಲುಕುನಾಯಕರ ಪರಿಶ್ರಮದ ಫಲ: ಅಪ್ಪಚ್ಚು ರಂಜನ್

ದೇಶದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಬಾರಿ ಬಿಜೆಪಿ ಚುನಾವಣೆಯನ್ನು ಎದುರಿಸಿದ್ದು, ಕಾರ್ಯಕರ್ತರ ಪರಿಶ್ರಮ ಜನತೆಯ ವಿಶ್ವಾಸದಿಂದ ಪಕ್ಷ ಈ ರೀತಿಯ ಗೆಲವು ಸಾಧಿಸಲು ಸಾಧ್ಯವಾಯಿತು ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹರ್ಷ ವ್ಯಕ್ತಪಡಿಸಿದ್ದಾರೆ.