ಮಡಿಕೇರಿ, ಮೇ. 22: ತಲಕಾವೇರಿಯಲ್ಲಿ ಯಾವದೇ ಕಾಮಗಾರಿ ನಡೆಸಬೇಕಾದರೆ ವ್ಯವಸ್ಥಾಪನಾ ಸಮಿತಿಯು ಪೂರ್ವಭಾವಿಯಾಗಿ ಜಿಲ್ಲಾಡಳಿತದಿಂದ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಣಾಧಿಕಾರಿಯವರಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.
‘ಶಕ್ತಿ'ಯಲ್ಲಿ ಇಂದು ಪ್ರಕಟಗೊಂಡ ಕುಂಡಿಕೆ ಬಳಿಯಲ್ಲಿ ಕಾಮಗಾರಿ ನಡೆಯಲಿರುವ ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಈ ಕ್ರಮ ಕೈಗೊಂಡಿದ್ದಾರೆ.
ಅಧ್ಯಕ್ಷರ ಸಮಜಾಯಿಷಿಕೆ : ‘ಶಕ್ತಿ’ಯಲ್ಲಿ ಇಂದು ಪ್ರಕಟಗೊಂಡ ವರದಿ ಕುರಿತು ಭಾಗಮಂಡಲ- ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರು ಸಮಜಾಯಿಷಿಕೆ ನೀಡಿದ್ದಾರೆ. (ಮೊದಲ ಪುಟದಿಂದ) ಸ್ನಾನ ಕೊಳದ ಜಲಮೂಲವು ಹನ್ನೆರಡು ವರ್ಷಗಳ ಹಿಂದೆ ನಿರ್ಮಿಸಿದ ತಡೆಗೋಡೆಯ ಕಾಮಗಾರಿಯಲ್ಲಿ ದೋಷ ಉಂಟಾಗಿ ಅದರ ನೀರಿನ ಒಳಹರಿವಿಗೆ ತಡೆಯುಂಟಾಗಿ, ಕೊಳದಲ್ಲಿ ಸ್ನಾನ ಮಾಡುವ ಭಕ್ತಾದಿಗಳಿಗೆ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕೊಳದಲ್ಲಿರುವ ನೀರನ್ನು ಪ್ರತಿ ಹದಿನೈದು ದಿವಸಕ್ಕೊಮ್ಮೆ ಬದಲಾಯಿಸಬೇಕಾಗಿತ್ತು. ಅದಕ್ಕೆ ಸಂಬಂಧಪಟ್ಟ ಭೂ ವಿಜ್ಞಾನ ತಜ್ಞರನ್ನು ಕರೆಸಿ ಅವರಿಂದ ಅದರ ವಿಭಜನೆಗೊಂಡ ನೀರಿನ ಸೆಲೆಯನ್ನೂ ಗುರುತಿಸಿ ಮತ್ತು ಅದರ ಬಗ್ಗೆ ದೇವಸ್ಥಾನÀ ಸಮಿತಿ ಸಭೆಯನ್ನು ಕರೆದು ಚರ್ಚಿಸಿ ಕ್ಷ್ಷೇತ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಪರಿಣಿತರನ್ನು ಕರೆದು ಸ್ಥಳ ವೀಕ್ಷಣೆ ಮಾಡಲಾಗಿದೆ.
ತಲಕಾವೇರಿ ಕುಂಡಿಕೆ ಬಳಿ ಯಾವ ಮಠದ ಸ್ವಾಮೀಜಿಯಿಂದಲೂ ಜಲಸಂಚಾರಕ್ಕೆ ತಡೆಯಾಗಿರುವದನ್ನು ಯಾಂತ್ರಿಕವಾಗಿ ಸರಿಪಡಿಸುವ ಕುರಿತು ನಿರ್ಧರಿಸಿಲ್ಲ.
ಅಲ್ಲದೆ ಈ ಶುಕ್ರವಾರ ಮತ್ತು ಶನಿವಾರದಂದು ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.