ವೀರಾಜಪೇಟೆ, ಮೇ 22: ಜಾತ್ಯತೀತವಾಗಿ ಎಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲಿಯೂ ಮೂಡಬೇಕು. ಜಾತ್ಯತೀತ ಸಮಾಜದಲ್ಲಿ ಪ್ರತಿಯೊಬ್ಬರು ಪ್ರೀತಿ ವಿಶ್ವಾಸವನ್ನು ಹಂಚಿಕೊಂಡು ಬದುಕುವದು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ ಎಂದು ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆ ಮುಸ್ಲಿಂ ಒಕ್ಕೂಟದಿಂದ ಇಲ್ಲಿನ ಡಿ.ಎಚ್. ಎಸ್. ಎನ್‍ಕ್ಲೇವ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಂಜಾನ್ ಪ್ರಯುಕ್ತ ಇಫ್ತಾರ್ ಸ್ನೇಹ ಮಿಲನವನ್ನು ಉದ್ಘಾಟಿಸಿ ಮಾತನಾಡಿದ ಸಂಕೇತ್ ಪೂವಯ್ಯ ಪವಿತ್ರ ಖುರಾನ್ ಅವತೀರ್ಣಗೊಂಡ ತಿಂಗಳು ಎಂಬ ನೆಲೆಯಲ್ಲಿ ರಂಜಾನಿಗೆ ಮಹತ್ವವಿದೆ. ಆದುದರಿಂದ ಸೃಷ್ಟಿಕರ್ತನಿಗೆ ಕೃತಜ್ಞತೆ ತೋರಿಸಲಿಕ್ಕಾಗಿ ವಿಶ್ವಾಸಿಗಳು ಒಂದು ತಿಂಗಳ ಉಪವಾಸವಿರುತ್ತಾರೆ. ಇಸ್ಲಾಮಿನ ಝಕಾತ್ ವ್ಯವಸ್ಥೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯಪಾಲನೆಗೆ ಮೇಲ್ದರ್ಜೆ ಹಾಕಿಕೊಟ್ಟ ವ್ಯವಸ್ಥೆಯಾಗಿದೆ, ಈ ನಿಟ್ಟಿನಲ್ಲಿ ರಂಜಾನ್ ಉಪವಾಸ ಮನುಷ್ಯನಿಗೂ ದೇವನಿಗೂ ಮಧ್ಯೆ ಇರುವ ಸಂಬಂಧವನ್ನು ಇನ್ನಷ್ಟು ಸದೃಢÀಗೊಳಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ಕೇಂದ್ರೀಯ ಪ್ರತಿನಿಧಿ ಮಂಡಲಿ ಸದಸ್ಯ ಅಕ್ಬರ್ ಅಲಿ ಉಡುಪಿಯವರು ಮಾತನಾಡಿ, ಧರ್ಮ ಇರುವಲ್ಲಿ ಅಪನಂಬಿಕೆ ಇರುವದಿಲ್ಲ, ಧರ್ಮ ಇರುವಲ್ಲಿ ವೈರತ್ವ ಇರುವದಿಲ್ಲ. ಧರ್ಮ ಇರುವಲ್ಲಿ ವಂಚನೆ ಇರುವದಿಲ್ಲ. ಧರ್ಮದ ಕೆಲಸ ಮನುಷ್ಯನನ್ನು-ಮನುಷ್ಯನೊಂದಿಗೆ ಜೋಡಿಸುವದಲ್ಲದೆ ಮನುಷ್ಯನನ್ನು ಸೃಷ್ಟಿಕರ್ತನೊಂದಿಗೆ ಜೋಡಿಸುತ್ತದೆ ಎಂದರು.

ಇಫ್ತಾರ್ ಸ್ನೇಹ ಮಿಲನದ ಸಭೆಯನ್ನುದ್ದೇಶಿಸಿ ಸದ್ಭಾವನಾ ಮಂಚ್‍ನ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಮಾತನಾಡಿದರು. ಮುಸ್ಲಿಂ ಒಕ್ಕೂಟದ ಉಪಾಧ್ಯಕ್ಷ ಎಂ.ವೈ.ನಿಸಾರ್ ಅಹಮದ್, ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಕೆ.ಪಿ.ಕುಂಞÂಮುಹಮ್ಮದ್ ವೇದಿಕೆಯಲ್ಲಿದ್ದರು. ಪಿ.ಕೆ.ಅಬ್ದುಲ್ ರೆಹೆಮಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆ.ಟಿ.ಬಷೀರ್ ನಿರೂಪಿಸಿದರು.