ಕಾಂಗ್ರೆಸ್ ಟೀಕೆ
ಮಡಿಕೇರಿ, ಮೇ 21: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೊಡಗು-ಮೈಸೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಗೆಲ್ಲುತ್ತಾರೆ ಒಂದು ವೇಳೆ ಸೋತರೆ ಅದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ನೀಡಿರುವ ಹೇಳಿಕೆ ಅವರ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಟೀಕಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕಾಂಗ್ರೆಸ್ ವಕ್ತಾರ ಸುರೇಶ್, ಗಣೇಶ್ ಅವರು ನೀಡಿರುವ ಹೇಳಿಕೆ ಬೇಜವಾಬ್ದಾರಿ ಹೇಳಿಕೆಯಾಗಿದೆ, ವಿಜಯಶಂಕರ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವದರಿಂದ ಅವರ ಗೆಲವಿಗೆ ಶ್ರಮಿಸುವದು ಜಾತ್ಯಾತೀತ ಜನತಾದಳದ ಕರ್ತವ್ಯವೂ ಆಗಿದೆ. ಕೊಡಗು ಜಿಲ್ಲಾ ಕಾಂಗ್ರೆಸ್ ಜಾತ್ಯತೀತ ಜನತಾದಳವನ್ನು ಕಡೆಗಣಿಸಿಲ್ಲ ಹಾಗೂ ಕಾಂಗ್ರೆಸ್ ಪಕ್ಷದವರ ನಡೆಯಿಂದ ಯಾವ ಅಲ್ಪಸಂಖ್ಯಾತರರಿಗೂ ಬೇಸರ ಮೂಡಿಸಿಲ್ಲ. ಕಾಂಗ್ರೆಸ್ ಉಭಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ಸಂದರ್ಭದಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.