ನಮ್ಮ ಸುತ್ತಮುತ್ತಲಿನ ಎಲ್ಲಿ ನೋಡಿದರೂ ಮೊಬೈಲ್ ಮೊಬೈಲ್. ಶಾಲೆಗೆ ತೆರಳುವ ಮಕ್ಕಳು, ಕಚೇರಿಗೆ ಕೆಲಸಕ್ಕೆ ತೆರಳುವ ಜನರು ಎಲ್ಲರೂ ಮೊಬೈಲ್‍ನಲ್ಲಿ ಬಿಜಿó.

ಏಕೆಂದರೆ ಎಲ್ಲರ ಹತ್ತಿರವೂ ಮೊಬೈಲ್. ಮೊಬೈಲ್‍ಗಳಲ್ಲಿ ಫೇಸ್‍ಬುಕ್, ವಾಟ್ಸ್ ಆ್ಯಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ತಮ್ಮನ್ನು ತೊಡಗಿಸಿಕೊಂಡಂತೆ ಕಾಣುತ್ತದೆ. ಸೆಲ್ಫಿ ತೆಗೆಯುವದರಲ್ಲಿ ಬಿಜಿó. ಮಾರುಕಟ್ಟೆ, ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಯಾರ ಕೈಯಲ್ಲೂ ಮೊಬೈಲ್.

ಹಾಗಾದರೆ ಶಿಕ್ಷಣ ಪೂರೈಸಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವ ವಿದ್ಯಾರ್ಥಿಗಳ ಕಥೆ ದೇವರೇ ಗತಿ. ಏಕೆಂದರೆ ಅವರೂ ಮೊಬೈಲ್ (ಸ್ಮಾರ್ಟ್ ಫೋನ್) ತೆಗೆದುಕೊಂಡು ಚಾಟ್ ಮಾಡುವದರಲ್ಲಿ ಬಿಜಿó. ಹೊಸ ಹೊಸ ಸಿನೆಮಾ ಡೌನ್‍ಲೋಡ್ ಮಾಡುವದರಲ್ಲಿ ಬಿಜಿó.

ಮನೆಗೆ ತೆರಳಿ ಹೋಮ್ ವರ್ಕ್ ಮಾಡುವಾಗಲೂ ಚಾಟಿಂಗ್, ಫೇಸ್‍ಬುಕ್ ವಾಟ್ಸ್ ಆ್ಯಪ್‍ನಲ್ಲಿ ಗಂಟೆಗಟ್ಟಲೇ ಕಳೆಯುವ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಎಷ್ಟು ಗಮನಹರಿಸುತ್ತಾರೋ ಗೊತ್ತಿಲ್ಲ. ಮೊಬೈಲ್ ಬಂದಾಗಿನಿಂದ ಮಕ್ಕಳು ಆಟೋಟಗಳಲ್ಲಿ ಪಾಲ್ಗೊಳ್ಳದೇ ಸಾಮಾಜಿಕ ತಾಣಗಳಲ್ಲಿ ಸಮಯ ಕಳೆಯುವದೇ ಹೆಚ್ಚಾಗಿ ಹೋಗಿದೆ.

ಆರೋಗ್ಯಕ್ಕೆ ಅಪಾಯ

ಇಂದಿನ ಮಕ್ಕಳು ರೇಡಿಯೋ ಫ್ರೀಕ್ವೆನ್ಸಿ ಪರಿಸರದಲ್ಲಿ ಬೆಳೆಯುತ್ತಿದ್ದಾರೆ. ಇದು ಹಿಂದೆಂದೂ ಮಾನವ ಇತಿಹಾಸದಲ್ಲಿ ಅಸ್ತಿತ್ವದಲ್ಲಿಲ್ಲ. ಸ್ಮಾರ್ಟ್‍ಫೋನ್‍ಗಳಿಂದ ಹೊರಸೂಸಲ್ಪಟ್ಟ ವಿಕಿರಣ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ವಯಸ್ಕರಿಗಿಂತ ಮಕ್ಕಳ ಮಿದುಳಿನೊಳಗೆ ಶೇ. 60 ರಷ್ಟು ವಿಕಿರಣವನ್ನು ಹೀರಿಕೊಳ್ಳುತ್ತಾರೆ. ಅವರ ಮೆದುಳಿನ ತೆಳ್ಳಗಿನ ಚರ್ಮ, ಅಂಗಾಂಶಗಳು ಮತ್ತು ಮೂಳೆಗಳು ವಯಸ್ಕರಿಗಿಂತ ಎರಡು ಬಾರಿ ವಿಕಿರಣವನ್ನು ಹೀರಿಕೊಳ್ಳಲು ಅವಕಾಶ ನೀಡುತ್ತದೆ. ತಮ್ಮ ಸೆಲ್‍ಫೋನ್ ಬಳಕೆಗೆ ಸೀಮಿತವಾದ ಮಕ್ಕಳು ಹೆಚ್ಚು ನಿದ್ರಾಹೀನತೆ, ನಿರುತ್ಸಾಹ ಮತ್ತು ಆಯಾಮವನ್ನು ಅನುಭವಿಸಬಹುದು.

ಮನೆಯ ಸಾಂಪ್ರದಾಯಕ್ಕೆ ಕುತ್ತು

ಮೊಬೈಲ್ ಬರದ ಆ ದಿನಗಳಲ್ಲಿ ಹಬ್ಬ ಹರಿದಿನಗಳನ್ನು ಅತಿ ಉತ್ಸಾಹದಿಂದ, ಪೋಷಕರೊಂದಿಗೆ ಆಚರಿಸುತ್ತಿದ್ದ ವಿದ್ಯಾರ್ಥಿಗಳು ಇಂದು ಚಾಟಿಂಗ್‍ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪೋಷಕರೊಂದಿಗೆ ಸರಿಯಾಗಿ ಬೆರೆಯುತ್ತಿಲ್ಲ.

ಮೊದಲು ಮನೆ ಮಂದಿಯೆಲ್ಲ ನಡೆಸಿಕೊಂಡು ಬರುತ್ತಿದ್ದ ಸಂಪ್ರದಾಯ ಈಗ ಅಪರೂಪವಾಗಿದೆ. ಒಟ್ಟಿನಲ್ಲಿ ಮೊಬೈಲ್ ನಮ್ಮ ಹಬ್ಬ-ಹರಿದಿನಗಳ ಆಚರಣೆ ಕಿತ್ತುಕೊಂಡಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಹವ್ಯಾಸಗಳ ಮೇಲೆ ಪರಿಣಾಮ

ಶಾಲೆಗಳಲ್ಲಿ ನೀಡಿದ ಹೋಮ್‍ವರ್ಕ್ ಸರಿಯಾಗಿ ಮಾಡದೇ ಇರಬಹುದು, ಯಾವಾಗಲೂ ಚಾಟಿಂಗ್‍ನಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸಿ ತಮ್ಮ ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಳ್ಳಬಹುದು.

ಅಸಮರ್ಪಕ ಬಳಕೆ

ಮೊಬೈಲ್ ಕಂಪೆನಿಗಳು ನೀಡುವ ಅನ್‍ಲಿಮಿಟೆಡ್ ಡಾಟಾ ಉಚಿತವಾಗಿರುವದರಿಂದಲೂ ಮಕ್ಕಳಲ್ಲಿ ವಿಪರೀತ ಇಂಟರ್‍ನೆಟ್ ಗೀಳು ಬೆಳೆಯಲು ಕಾರಣ. ಸೆಲ್‍ಫೋನ್‍ಗಳಿಂದ ಮಕ್ಕಳು ಅನುಚಿತ ವರ್ತನೆಗಳಲ್ಲಿ ತೊಡಗಿಸಿಕೊಳ್ಳಬಹುದು. ಹಾನಿಕಾರಕ ಹಾಗೂ ಆಘಾತಕಾರಿ ವಿಷಯಗಳನ್ನು ತೋರಿಸುವ ಸೈಟ್‍ಗಳನ್ನು ಅವರು ಸುಲಭವಾಗಿ ಪರಿಶೀಲಿಸಬಹುದು. ಚಿಕ್ಕ ವಯಸ್ಸಿನಲ್ಲೇ ಅಶ್ಲೀಲ ವೀಡಿಯೋಗಳನ್ನು ನೋಡುತ್ತಾರೆ. ಆಗ ಅವರು ತಮ್ಮ ಮನಸ್ಸು ಕೆಡಿಸಿಕೊಂಡು ತಮ್ಮ ವಿದ್ಯಾಭ್ಯಾಸದಲ್ಲಿ ಹಿಂದುಳಿಯಬಹುದು. ಬ್ಲೂವೇಲ್‍ಗಳಂತಹ ಮಾರಣಾಂತಿಕ ಆನ್‍ಲೈನ್ ಆಟಕ್ಕೆ ಅಂಟಿಕೊಂಡು ತಮ್ಮ ಜೀವನವನ್ನು ಕಳೆದುಕೊಳ್ಳಲೂ ಬಹುದು.ಹದಿಹರೆಯದ ವಯಸ್ಸಿನಲ್ಲಿ ತಮ್ಮ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿ ಬ್ಲ್ಯಾಕ್‍ಮೇಲ್‍ಗೆ ಒಳಗಾಗಬಹುದು. ಇದರಿಂದ ತಮ್ಮ ಜೀವನವನ್ನೇ ಹಾಳುಮಾಡಿ ಕೊಳ್ಳಬಹುದು.

ಜೀವಕ್ಕೆ ಅಪಾಯ

ಎಷ್ಟೋ ಹದಿಹರೆಯದವರು ರಸ್ತೆ ದಾಟುವಾಗ, ರೈಲ್ವೆ ಹಳಿ ದಾಟುವಾಗ, ಬೈಕ್ ಚಲಾಯಿಸುವಾಗ, ಕಾರ್ ಚಲಾಯಿಸುವಾಗ ಈಯರ್ ಫೋನ್ ಕಿವಿಯಲ್ಲಿ ಸಿಕ್ಕಿಸಿಕೊಂಡೇ ಇರುತ್ತಾರೆ. ಇದರಿಂದ ಅವರ ಜೀವಕ್ಕೆ ಅಪಾಯವಾದ ಘಟನೆಗಳು ಸಾಕಷ್ಟು ನಡೆದಿದೆ.

ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಏಕಿಲ್ಲ

ಇದೇ ಕಾರಣಕ್ಕಾಗಿಯೇ ಕಾಲೇಜುಗಳಲ್ಲಿ ಮೊಬೈಲ್ ತರುವದನ್ನು ನಿಷೇಧಿಸಲೇಬೇಕಿದೆ. ಏಕೆಂದರೆ ಸಾಮಾಜಿಕ ತಾಣಗಳ ಬಳಕೆ ಒಂದು ತರಹದ ಡ್ರಗ್ಸ್ ಚಟದಂತೆ ಅಂಟಿಕೊಂಡಿರುವದಂತೂ ಸುಳ್ಳಲ್ಲ. ಅದರಲ್ಲೂ ಲಾಸ್ಟ್ ಬೆಂಚ್ ವಿದ್ಯಾರ್ಥಿಗಳು ಶಿಕ್ಷಕರಿಂದ ದೂರವಿರುವದರಿಂದ ಅವರು ಪಾಠ ಕೇಳದೇ ಮೊಬೈಲ್‍ನಲ್ಲೇ ತಲ್ಲೀನರಾಗಿರಬಹುದು. ಇದಕ್ಕೆ ತದ್ವಿರುದ್ಧ ಎನ್ನುವಂತೆ ಕಾಲೇಜುಗಳು, ಟ್ಯೂಷನ್ ಸೆಂಟರ್‍ಗಳು ಉಚಿತ ವೈಫೈ ನೀಡಿ ವಿದ್ಯಾರ್ಥಿಗಳು ಹಾಳಾಗಲು ಮತ್ತಷ್ಟು ಕುಮ್ಮಕ್ಕು ನೀಡುತ್ತಿವೆ. ಅದೊಂದು ಅವರಿಗೆ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವ ಗಿಮಿಕ್ ಆಗಿ ಬಿಟ್ಟಿದೆ.

ಸೆಲ್ಫಿ ಹುಚ್ಚು

ಅಪಾಯಕಾರಿ ಸ್ಥಳಗಳಲ್ಲಿ ನಿಂತುಕೊಂಡು ಸೆಲ್ಫಿ ತೆಗೆಯಲು ಹೋಗಿ ಎಷ್ಟೋ ಹದಿ ಹರೆಯದವರು ಪ್ರಾಣ ಕಳೆದುಕೊಂಡಿದ್ದಾರೆ, ಕಳೆದುಕೊಳ್ಳುತ್ತಿದ್ದಾರೆ. ಅಲ್ಲಿ ಎಚ್ಚರಿಕೆ ಎನ್ನುವ ಸೂಚನಾ ಫಲಕವಿದ್ದರೂ ಲೆಕ್ಕಿಸದೆ ಸೆಲ್ಫಿ ತೆಗೆಯಲು ಹೋಗಿ ಜೀವಕ್ಕೆ ಅಪಾಯ ತಂದೊಡ್ಡ್ಡಿಕೊಳ್ಳುತ್ತಿದ್ದಾರೆ.

ಅಧ್ಯಯನವೊಂದು ಹೇಳುವ ಪ್ರಕಾರ ಜಗತ್ತಿನ ಇತರ ದೇಶಗಳಿಗಿಂತ ಭಾರತದಲ್ಲಿ ಅತೀ ಹೆಚ್ಚು ಯುವಕರು ಬಲಿಯಾಗಿದ್ದಾರೆ. ಅದರಲ್ಲೂ 24 ವರ್ಷಕ್ಕಿಂತ ಕಡಿಮೆ ಇರುವ ಯುವಕರು ಎನ್ನುವದು ಕಳವಳಕಾರಿ ಸಂಗತಿ.

ಗಿಫ್ಟ್ ಎಂಬ ಗೀಳು

ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದಂದು ತಮ್ಮ ಸ್ನೇಹಿತರಿಂದ ಆಧುನಿಕ ಮೊಬೈಲ್‍ಗಳನ್ನು ಗಿಫ್ಟ್ ರೂಪದಲ್ಲಿ ಪಡೆಯುತ್ತಾರೆ. ಈಗಂತೂ ಆನ್‍ಲೈನ್ ಮಾರಾಟ ಕಂಪೆನಿಗಳು ತಾಮುಂದು-ನಾಮುಂದು ಎಂದು ನೀಡುವ ಆಫರ್‍ಗಳಿಂದ ಮೊಬೈಲ್, ಬಟ್ಟೆ ಮುಂತಾದ ವಸ್ತುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಒಟ್ಟಾರೆ ಮೊಬೈಲ್‍ನಿಂದ ಆಗುವ ಒಳ್ಳೆಯ ಪರಿಣಾಮಗಳಿಗಿಂತ ಮಕ್ಕಳ ಮೇಲೆ ಆಗುವ ದುಷ್ಪರಿಣಾಮಗಳೇ ಹೆಚ್ಚು ಎಂದು ಈಗಿನ ಸಮಾಜವನ್ನು ನೋಡಿದಾಗ ಕಂಡುಬರುವ ಸತ್ಯವಾಗಿದೆ.

- ಕೆ.ಎಂ ಇಸ್ಮಾಯಿಲ್ ಕಂಡಕರೆ