ಮಡಿಕೇರಿ, ಮೇ 21: ಕೊಡಗು ಜಿಲ್ಲೆಯ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ಕಚೇರಿ, ವಸತಿ ಗೃಹ ಮತ್ತಿತರ ದುರಸ್ತಿ ಕಾಮಗಾರಿಗಳಿಗೆ ಇಂದು ಪೊಲೀಸ್ ವಸತಿ ಗೃಹ ನಿರ್ಮಾಣ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಕಿಶೋರ್‍ಚಂದ್ರ ಅವರು ನಗರದ ಡಿಎಆರ್ ವಸತಿ ಗೃಹದ ಬಳಿ ಭೂಮಿ ಪೂಜೆ ನೆರವೇರಿಸಿದರು.ಕಳೆದ ಬಾರಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಪೊಲೀಸ್ ಇಲಾಖೆಗೆ ಸೇರಿದ ಕಟ್ಟಗಳಿಗೂ ಹಾನಿಯಾಗಿತ್ತು. ಈ ವೇಳೆ ಪೊಲೀಸ್ ವಸತಿ ಗೃಹ ನಿರ್ಮಾಣ ಮಂಡಳಿಯಿಂದ ತಂತ್ರಜ್ಞರ ತಂಡ ರಚಿಸಿ ಕೊಡಗಿನಲ್ಲಿ ಆಗಬೇಕಿರುವ ಅಗತ್ಯ ಕಾಮಗಾರಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು. ಅದರಂತೆ ಮಡಿಕೇರಿ, ಕುಟ್ಟ, ಸೋಮವಾರಪೇಟೆ ಹಾಗೂ ಶನಿವಾರಸಂತೆಯಲ್ಲಿ ಪೊಲೀಸ್ ಅಧಿಕಾರಿಗಳ ಕಚೇರಿ ದುರಸ್ತಿ, ವಸತಿ ಗೃಹಗಳಿಗೆ ತಡೆಗೋಡೆ ನಿರ್ಮಾಣ, ಕಾಂಕ್ರಿಟ್ ರಸ್ತೆ ನಿರ್ಮಾಣ, ಒಳಚರಂಡಿ ವ್ಯವಸ್ಥೆ ಕಲ್ಪಿಸುವದಕ್ಕಾಗಿ ರೂ. 10 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇಂದು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಎಸ್ಪಿ ಡಾ. ಸುಮನ್ ತಿಳಿಸಿದರು.ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಡಿಜಿಪಿ ಮಾಲಿನಿ ಕೃಷ್ಣ ಮೂರ್ತಿ, ನಕ್ಸಲ್ ನಿಗ್ರಹದಳದ ಡಿಐಜಿ ವಿಕಾಸ್ ಕುಮಾರ್, ವಿಕಾಸ್, ಐಜಿ ಉಮೇಶ್ ಕುಮಾರ್, ಡಿವೈಎಸ್ಪಿ ಸುಂದರ್‍ರಾಜ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.