ಕೂಡಿಗೆ, ಮೇ 21: ಕೂಡಿಗೆ, ಕುಶಾಲನಗರ ವ್ಯಾಪ್ತಿಯಲ್ಲಿ ಹೆಚ್ಚು ವಾಹನಗಳ ಸಂಚಾರವಾಗುತ್ತಿದ್ದು, ಸಂಚಾರಿ ನಿಯಮ ಪಾಲಿಸದೆ ವಾಹನ ಸಂಚರಿಸುವ ಸವಾರರಿಗೆ ಸೂಚನೆ ನೀಡಿ, ದಂಡ ವಿಧಿಸುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಅದರಂತೆ ದ್ವಿಚಕ್ರ ವಾಹನಗಳನ್ನು ಹಾಗೂ ಆಟೋಗಳನ್ನು ತಡೆದು ತಪಾಸಣೆ ನಡೆಸಿ, ಎಫ್ಸಿ, ಇನ್ಶೂರೇನ್ಸ್, ವಾಹನ ಪರವಾನಿಗೆ ಹೊಂದದೆ ಸಂಚರಿಸುತ್ತಿದ್ದ ಆಟೋ ಚಾಲಕರಿಗೆ ದಂಡ ವಿಧಿಸಿ, ಯಾವದೇ ದಾಖಲಾತಿ ಹೊಂದಿರದ 50 ಕ್ಕೂ ಹೆಚ್ಚು ಆಟೋಗಳನ್ನು ಪೊಲೀಸರು ವಶ ಪಡಿಸಿಕೊಂಡು, 400ಕ್ಕೂ ಅಧಿಕ ಮೊಕದ್ದಮೆ ದಾಖಲಿಸಿ, 75 ಸಾವಿರದಷ್ಟು ದಂಡ ವಸೂಲಿ ಮಾಡಿದ್ದಾರೆ.
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು, ಸಹಾಯಕ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ತಂಡಗಳಾಗಿ ಕೂಡಿಗೆ ಕುಶಾಲನಗರ ಮುಖ್ಯ ರಸ್ತೆಯ ಕೈಗಾರಿಕ ಬಡಾವಣೆ, ಸುಂದರನಗರ ರಸ್ತೆ, ಕುಶಾಲನಗರ ಐ.ಬಿ.ರಸ್ತೆಯಲ್ಲಿ, ಬಿ.ಎಂ. ರಸ್ತೆ, ಕುಶಾಲನಗರ ಕಾರ್ಯಪ್ಪ ವೃತ್ತದಲ್ಲಿ ತಪಾಸಣೆ ನಡೆಸಿ ಹಲವು ದ್ವಿಚಕ್ರ ವಾಹನ ಮತ್ತು ಆಟೋಗಳ ಚಾಲಕರಿಗೆ ದಂಡ ವಿಧಿಸಿದ್ದಾರೆ.
ಕುಶಾಲನಗರ ಡಿವೈಎಸ್ಪಿ ದಿನಕರ್ ಶೆಟ್ಟಿ ಅವರು ಆದೇಶದಂತೆ ವೃತ್ತ ನಿರೀಕ್ಷಕ ದಿನೇಶ್ಕುಮಾರ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕುಶಾಲನಗರದಲ್ಲಿ ಸಂತೆ ದಿನವಾದ ಮಂಗಳವಾರದಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಾಹನ ತಪಾಸಣೆ ಕಾರ್ಯದಲ್ಲಿ ತೊಡಗಿದ್ದರು.
ರಾಜಕಾರಣಿಗಳ ಅಡ್ಡಿ
ಪಟ್ಟಣದಲ್ಲಿ ಎರಡು ಸಾವಿರಕ್ಕೂ ಅಧಿಕ ಆಟೋಗಳು ಓಡಾಡುತ್ತಿದ್ದು ಕೆಲವು ಆಟೋರಿಕ್ಷಾಗಳು ಯಾವದೇ ದಾಖಲೆಗಳಿಲ್ಲದೆ ಪ್ರಯಾಣಿಕರನ್ನು ಒಯ್ಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೋಲೀಸರು ಕಳೆದ ಎರಡು ದಿನಗಳಿಂದ ಹಲವು ತಂಡಗಳ ಮೂಲಕ ದಾಖಲೆ ಪರಿಶೀಲನೆ ಮಾಡುವ ಕಾರ್ಯ ಕೈಗೊಂಡು ದಾಖಲೆರಹಿತ ಆಟೋಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಚಾಲಕರಿಂದ ಒಂದೇ ದಿನದ ಅವಧಿಯಲ್ಲಿ ಅಧಿಕ ದಂಡ ಸಂಗ್ರಹಿಸಿದ್ದು ದಾಖಲೆ ಎನ್ನಬಹುದು. ಈ ನಡುವೆ ದಾಖಲೆಗಳಿಲ್ಲದ ಅಕ್ರಮ ಆಟೋಗಳ ಬಿಡುಗಡೆ ಮಾಡುವಂತೆ ಕೆಲವು ರಾಜಕಾರಣಿಗಳು ಪೊಲೀಸರ ಕಾರ್ಯಾಚರಣೆಗೆ ಅಡ್ಡಿ ಮಾಡುತ್ತಿದ್ದ ಪ್ರಸಂಗಗಳು ಪೊಲೀಸರಿಗೆ ಇರುಸುಮುರುಸು ಉಂಟುಮಾಡುತ್ತಿದ್ದುದು ಕಂಡುಬಂತು.
- ಕೆ.ಕೆ.ಎನ್. ಶೆಟ್ಟಿ, ಸಿಂಚು