ಶನಿವಾರಸಂತೆ, ಮೇ 19: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಶನಿವಾರ ನಡೆದ ಹಸಿರುಮೆಣಸಿನಕಾಯಿ ಸಂತೆಯಲ್ಲಿ ಕಳೆದ ವಾರಕ್ಕಿಂತ ಈ ವಾರ ಉತ್ತಮ ಬೆಲೆ ದೊರೆತು ರೈತರ ಮೊಗದಲ್ಲಿ ಸಂತಸ ಮೂಡಿತು., ಈ ವಾರ ಮಾರುಕಟ್ಟೆಗೆ ಮುಂಜಾನೆಯೆ 5 ಲೋಡ್ ಮೆಣಸಿನಕಾಯಿ ಬಂದಿತ್ತು. 17 ಕೆ.ಜಿ. ಹಸಿರುಮೆಣಸಿನಕಾಯಿ ತುಂಬಿದ ಚೀಲಕ್ಕೆ ರೂ.700 ಉತ್ತಮ ದರ ದೊರೆಯಿತು. ಕಳೆದ ವಾರ 25 ಕೆ.ಜಿ. ತುಂಬಿದ ಚೀಲಕ್ಕೆ ರೂ. 450-550 ದರ ದೊರೆತು ರೈತರು ಬೇಸರದಿಂದ ಮನೆಯತ್ತ ಹೆಜ್ಜೆ ಹಾಕಿದ್ದರು.
‘ಸಂತೆ ಮಾರುಕಟ್ಟೆಗೆ ಬರುವ ಮಾಲು ಜಾಸ್ತಿ ಇದ್ದಾಗ ಬೆಲೆ ಕಡಿಮೆ. ಮಾಲು ಕಡಿಮೆಯಿದ್ದಾಗ ಬೆಲೆ ಜಾಸ್ತಿಯಾಗೋದು ಸಾಮಾನ್ಯ. ರೈತರ ಜೀವನ ಚೆನ್ನಾಗಿದ್ದರೇ ವ್ಯಾಪಾರಿಗಳ ಜೀವನವೂ ಚೆನ್ನಾಗಿರುತ್ತದೆ. ವ್ಯಾಪಾರ ಮಾಡುವದು ಸುಲಭ’ ಎನ್ನುತ್ತಾರೆ ಶಿವಮೊಗ್ಗದ ವ್ಯಾಪಾರಿ ಬಾಷಾ ಸಾಹೇಬ. ಶನಿವಾರಸಂತೆಯ ಹಸಿರುಮೆಣಸಿನಕಾಯಿ ಸಂತೆ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದಲ್ಲೂ ಖ್ಯಾತಿ ಪಡೆದಿದೆ. ಇಲ್ಲಿ ರೈತರಿಂದ ಖರೀದಿಸುವ ವಿವಿಧ ತಳಿಯ ಮೆಣಸಿನಕಾಯಿ ರಾಜ್ಯದ ಮುಖ್ಯ ನಗರಗಳಿಗೆ, ಹೊರ ರಾಜ್ಯಗಳಿಗೂ ರವಾನೆಯಾಗುತ್ತದೆ. ಅರಕಲಗೂಡು, ಮೈಸೂರು, ಶಿವಮೊಗ್ಗ, ಚಿತ್ರದುರ್ಗ ಇತರ ನಗರಗಳಿಂದಲೂ ವ್ಯಾಪಾರಿಗಳು ಈ ಮಾರುಕಟ್ಟೆಗೆ ಬರುತ್ತಾರೆ.
ಮಾರುಕಟ್ಟೆಯಲ್ಲಿ ಮಾರ್ಚ್ ತಿಂಗಳಿನಿಂದ ಮೆಣಸಿನಕಾಯಿ ಸಂತೆ ನಡೆಯುತ್ತಿದೆ. ಈ ವರ್ಷ ಮಳೆ ಸರಿಯಾಗಿ ಆಗದ ಕಾರಣ ಇಳುವರಿಯೂ ಕಡಿಮೆಯಾಗಿದೆ. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಗಳಿಂದ ಮಾತ್ರವಲ್ಲ, ನೆರೆಯ ಸೋಮವಾರಪೇಟೆ, ಸಕಲೇಶಪುರ ತಾಲೂಕುಗಳ ಗ್ರಾಮಗಳಿಂದಲೂ ರೈತರು ವಿವಿಧ ವಾಹನಗಳಲ್ಲಿ ಸಂತೆಗೆ ಮೆಣಸಿನಕಾಯಿ ತರುತ್ತಾರೆ. ಇನ್ನು ತಿಂಗಳ ಮೆಣಸಿನಕಾಯಿ ಸಂತೆ ನಡೆಯುತ್ತದೆ.
ಸಾಮಾನ್ಯವಾಗಿ ಮನೆ ಮಂದಿಯೇ ಗದ್ದೆಯಲ್ಲೆ ದುಡಿಯುವದು, ಮೆಣಸಿನಕಾಯಿ ಕೊಯ್ಯುವಾಗ ಮಾತ್ರ ಕೂಲಿಯಾಳುಗಳನ್ನು ಕರೆಯುತ್ತೇವೆ. ಬೇಸಾಯಕ್ಕೆ ಮಾಡುವ ಖರ್ಚು, ಸಾಗಾಟದ ವೆಚ್ಚ ಎಲ್ಲಾ ಕಳೆದು ಲಾಭ ಬಂದಾಗ ಶ್ರಮ ಸಾರ್ಥಕ ಎನಿಸುತ್ತದೆ ಎನ್ನುತ್ತಾರೆ ಮೂದರವಳ್ಳಿ ಗ್ರಾಮದ ರೈತ ರಾಜಪ್ಪ.
ಈ ವಿಭಾಗದಲ್ಲಿ ಹಸಿರು ಮೆಣಸಿನ ಕಾಯಿ ವ್ಯವಸಾಯ ರೈತರ ಮಳೆಗಾಲದ ಜೀವನಕ್ಕೆ ಆಧಾರವಾಗಿದೆ. ಗದ್ದೆ ಕೊಯ್ದು ಮುಗಿದು ಬೇಸಿಗೆಯಲ್ಲಿ ರೈತರು ಮೆಣಸಿನಕಾಯಿ, ಶುಂಠಿ, ಜೋಳ ಬೆಳೆಗಳನ್ನು ಬೆಳೆಯುತ್ತಾರೆ. ಜೀವನ ನಿರ್ವಹಣೆಯೊಂದಿಗೆ ಶೈಕ್ಷಣಿಕ ವರ್ಷಾರಂಭದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಾಯವಾಗುತ್ತದೆ.
-ನರೇಶ್ಚಂದ್ರ