ಶನಿವಾರಸಂತೆ, ಮೇ 19: ಪಟ್ಟಣದ ಪೊಲೀಸ್ ಠಾಣೆಯಲ್ಲಿ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಎಸ್‍ಐ ಹೆಚ್.ಎಂ. ಗೋವಿಂದ್ ಮಾತನಾಡಿ, ಪಟ್ಟಣದಲ್ಲಿ ಹಿಂದೂ - ಮುಸ್ಲಿಂ ಸಮುದಾಯದವರು ಬಹಳ ಅನ್ಯೋನ್ಯತೆಯಿಂದ ಬಾಳುತ್ತಿದ್ದಾರೆ. ಪರಸ್ಪರರ ಹಬ್ಬ ಹರಿದಿನಗಳಲ್ಲಿ, ಪೂಜಾ ಕೈಂಕರ್ಯಗಳಲ್ಲಿ ಸೌಹಾರ್ಧತೆಯಿಂದ ಬೆರೆಯುತ್ತಿದ್ದಾರೆ. ಮುಂಬರುವ ರಂಜಾನ್ ಹಬ್ಬದ ಸಂದರ್ಭದಲ್ಲೂ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಕರೆ ನೀಡಿದರು.
ಶನಿವಾರಸಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆದಿಲ್ ಪಾಶ, ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಪಿ. ಬೋಜಪ್ಪ ಹಾಗೂ ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಸ್ತಾಫ್ ಮಾತನಾಡಿದರು.
ಎಎಸ್‍ಐ ಕೃಷ್ಣೇಗೌಡ, ಮುಖಂಡರಾದ ಸರ್ದಾರ್ ಅಹಮ್ಮದ್, ಹೆಚ್.ಎಸ್. ಬಸವಕುಮಾರ್, ಸೈಯದ್ ಅಹಮ್ಮದ್, ಅಕ್ಮಲ್ ಪಾಶ, ಖಾದರ್, ರಜಾಕ್, ಪೊಲೀಸ್ ಸಿಬ್ಬಂದಿ ಹರೀಶ್ ಮತ್ತು ಷಣ್ಮುಖ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.