ಗೋಣಿಕೊಪ್ಪ ವರದಿ, ಮೇ 19: ಭಾರತೀಯ ಆಡಳಿತ ಸೇವೆಯಲ್ಲಿ ಹೆಚ್ಚು ಸೇವೆ ಸಲ್ಲಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.
ಗುರುವಾರ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮತ್ತು ವಸತಿನಿಲಯಗಳ ವಾರ್ಷಿ ಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಡಳಿತ ಸೇವೆಯೊಂದಿಗೆ ಅರಣ್ಯ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿದಾಗ ಒಂದಷ್ಟು ಅಭಿವೃದ್ಧಿ ಕಾಣಲು ಸಾಧ್ಯವಿದೆ. ಹಾಡಿಗಳಲ್ಲಿನ ಸಮಸ್ಯೆ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅವಶ್ಯಕತೆ ಇದೆ ಎಂದರು.
ಶಿಕ್ಷಣದ ನಂತರ ಭಾರತೀಯ ಆಡಳಿತ ಸೇವೆಯಲ್ಲಿ ಮೊದಲು ಜಿಲ್ಲಾಧಿಕಾರಿಯಾಗಿ ಕೊಡಗು ಜಿಲ್ಲೆಗೆ ನೇಮಕಗೊಂಡಾಗ ಒಂದಷ್ಟು ಗಲಿಬಿಲಿಗೊಂಡಿದ್ದೆ. ನಾನು ಮೆರಿಟ್ ವಿದ್ಯಾರ್ಥಿಯಾಗಿರುವ ಕಾರಣ ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ನನ್ನನ್ನು ಭಯದಿಂದ ಹೊರ ಬರುವಂತೆ ಮಾಡಿತು. ಪ್ರವಾಹದಿಂದಾಗಿ ಪುನರ್ವಸತಿ ಸಂದರ್ಭದಲ್ಲಿ ನನ್ನನ್ನು ಅಧಿಕಾರಿಯಾಗಿ ನೇಮಿಸಲಾಯಿತು. ಒಂದಷ್ಟು ಸಮಯ ಗಲಿಬಿಲಿಗೊಂಡರೂ ಚೇತರಿಸಿ ಕೊಂಡೇ ಎಲ್ಲ್ಲವನ್ನೂ ಪೂರೈಸುವ ವಿಶ್ವಾಸ ನನಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿದ್ಯಾರ್ಥಿಗಳೊಂದಿಗೆ ವೃತ್ತಿಯ ಆರಂಭದ ಅನುಭವವನ್ನು ಹಂಚಿಕೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಐ.ಎ.ಎಸ್ ಅಧಿಕಾರಿ ಎನ್. ಲಕ್ಷ್ಮಿ, ಅರಣ್ಯ ಶಾಸ್ತ್ರ ಹಾಗೂ ಭಾರತೀಯ ಆಡಳಿತ ಸೇವೆಯಲ್ಲಿ ಹೆಚ್ಚು ಪರಿಣಾಮಕಾರಿ ಸೇವೆ ನೀಡಲು ಅವಕಾಶವಿದೆ. ಸ್ಪಷ್ಟ ಗುರಿಯೊಂದಿಗೆ ಸೇವೆ ಸಲ್ಲಿಸಿದಾಗ ವೃತ್ತಿಯಲ್ಲಿ ಹೆಚ್ಚು ತೃಪ್ತಿ ಸಿಗುತ್ತದೆ ಎಂದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ. ಬಿ. ಹೇಮ್ಲಾ ನಾಯಕ್ ಗಿಡಕ್ಕೆ ನೀರೆರೆಯುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪದವಿ ನಂತರ ಹೆಚ್ಚಿನ ವಿದ್ಯಾರ್ಥಿಗಳು ನೇರವಾಗಿ ಉದ್ಯೋಗದತ್ತ ಆಸಕ್ತಿ ತೋರುತ್ತಿರುವದರಿಂದ ಅರಣ್ಯ ಶಾಸ್ತ್ರ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಅರಣ್ಯ ಶಾಸ್ತ್ರ ಬೋಧನೆಗೆ ಸಂಪನ್ಮೂಲ ವ್ಯಕ್ತಿಗಳ ಕೊರತೆ ಕಾಡುವದರಿಂದ ನಿವೃತ್ತಿ ಹೊಂದಿದವರನ್ನೇ ಬೋಧನೆಗೆ ಕರೆಸಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಅರಣ್ಯ ಶಾಸ್ತ್ರದಲ್ಲಿ ಉನ್ನತ ಶಿಕ್ಷಣಕ್ಕೆ ಮುಂದಾಗಬೇಕು ಎಂದರು.
ಶೀತಲ್ ಹಾಗೂ ತಂಡದವರು ರೈತ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದರು. ಡಾ. ಜಡೇಗೌಡ ಹಾಗೂ ಈಶ್ವರ್ ವರದಿ ವಾಚಿಸಿದರು. ಶಿಕ್ಷಣ, ಕ್ರೀಡೆ, ಸಾಂಸ್ಕøತಿಕ ವಿಭಾಗದ ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು.
ರಾಷ್ಟ್ರಮಟ್ಟದ ಕ್ರೀಡಾಕೂಟದ 800 ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆದ ಎಸ್. ಲಿಂಗರಾಜು, ರಾಜ್ಯಮಟ್ಟದ ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಪಡೆದ ಕ್ಷಮಾ ಕೋಪರ್ಡೆ, ಕಂಚಿನ ಪದಕ ಪಡೆದ ಶಾಂತಲಾ, ರಾಷ್ಟ್ರಮಟ್ಟದ ಆರ್ಡಿ ಪೆರೆಡ್ನಲ್ಲಿ ಪಾಲ್ಗೊಂಡಿದ್ದ ಶ್ವೇತಾ, ಸಿದ್ದಾರ್ಥ್ ಹಾಗೂ ಮಾಧುರ್ಯಗೌಡ ಅವರುಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭ ವಾರ್ಡನ್ ಗಣೇಶ್ ಪ್ರಸಾದ್, ನಿಲಯ ಪಾಲಕಿ ಶೋಭಾ, ವಿದ್ಯಾರ್ಥಿ ನಾಯಕರುಗಳಾದ ಶೀತಲ್, ಕಿರಣ್ ಉಪಸ್ಥಿತರಿದ್ದರು.
-ಸುದ್ದಿಪುತ್ರ