ವೀರಾಜಪೇಟೆ, ಮೆ. 19: ವಿವಿಧ ವೇಷಗಳನ್ನು ಧರಿಸಿ ಹರಕೆ ಒಪ್ಪಿಸುವ ಪರಿ ಬೇಡು ಹಬ್ಬದ ವಿಶೇಷತೆ. ಹರಕೆಯನ್ನು ಸ್ವೀಕರಿಸಿದ ಶ್ರೀ ದೇವಿಯು ಸಂತುಷ್ಟಳಾಗಿ ಸಕಲ ಬೇಡಿಕೆಯನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇದೆ.
ಇದರಂತೆ ಈ ಹಿಂದಿನಿಂದಲೂ ಆಚರಿಸಲ್ಪಡುತ್ತಿರುವ ವೀರಾಜಪೇಟೆ ತಾಲೂಕು ಬಿಳುಗುಂದ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ನಲ್ವತೊಕ್ಲು ಮತ್ತು ಬಿಳುಗುಂದ ಬೊಂದಾ ಮುನ್ನೂರು ಒಕ್ಕ ಗ್ರಾಮದಲ್ಲಿ ನಲೆಸಿರುವ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ 10 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು.
ತಾ. 7 ರಂದು ಊರಿಗೆ ಕಟ್ಟು ಬೀಳುವದು, ತಾ. 14 ರಂದು ಉತ್ಸವ ಪಟ್ಟಣಿ, ಕಳೆದು ರಾತ್ರಿ ಕಳಿ ಹಾಕುವದು (ಅಂದರೆ ವಿವಿಧ ವೇಷ ಧರಿಸಿಕೊಂಡು) ಗ್ರಾಮದಲ್ಲಿರುವ ಮನೆ ಮನೆಗಳಿಗೆ ತೆರಳಿ ಮನೆಯವರಿಂದ ಆತಿಥ್ಯ ಸ್ವೀಕರಿಸಿ ಅವರು ನೀಡುವ ಹರಕೆಯ ಹಣವನ್ನು ಶ್ರೀ ದೇವಿಗೆ ಹರಕೆ ಒಪ್ಪಿಸುತ್ತಾರೆ. ರಾತ್ರಿ ಸಮಯದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ದೇವಿಯ ಬನಕ್ಕೆ ತೆರಳಿ ಪೂಜೆಗೈದು ಹಿಂದಿರುಗಿದರು. ತಾ. 15 ರಂದು ಶ್ರೀ ದೇವಿಗೆ ವಿಶೇಷ ಅಲಂಕಾರ ಮತ್ತು ವಿವಿಧ ಪೂಜೆಗಳು ನಡೆಯಿತು. ವೇಷ ಧರಿಸಿದ ಪ್ರತಿಯೊಬ್ಬರು ದೇವಿಯ ದೇಗುಲಕ್ಕೆ ವಾದ್ಯಗಳೊಂದಿಗೆ ಆಗಮಿಸಿ ದೇವಿಗೆ ಹರಕೆ ಒಪ್ಪಿಸುವ ಪರಿಪಾಟವು ಅನಾದಿಕಾಲದಿಂದಲೂ ನಡೆದುಕೊಂಡಿದೆ ಎಂದು ಊರಿನ ಹಿರಿಯರಾದ ಐನಂಡ ಜಪ್ಪು ಅಚ್ಚಪ್ಪ ಅವರು ಪತ್ರಿಕೆಯೊಂದಿಗೆ ತಿಳಿಸಿದರು. ಕೊಪುಡ ಮನೆ ಮತ್ತು ನೆಲ್ಲಚಂಡ ಮನೆಯಿಂದ ಕುದುರೆ ಬರುವದು, ನಂತರದಲ್ಲಿ ಚೂಳೆ ಕಳಿ ನಡೆಯಿತು.
ಬೇಡು ಹಬ್ಬದಲ್ಲಿ ದುಡಿಕೊಟ್ಟು ವಿಶೇಷತೆ: ಬೇಡು ಹಬ್ಬದಲ್ಲಿ ವಿವಿಧ ವೇಷದಾರಿಗಳು ಮನೆ ಮನೆಗೆ ತೆರಳಿ ತಮ್ಮ ವೇಷಭೂಷಣಗಳನ್ನು ಪ್ರದರ್ಶನ ಮಾಡಿದ ನಂತರದಲ್ಲಿ ಶ್ರೀ ದೇವಿಯನ್ನು ಸ್ತುತಿಸಿ ಹಾಡುವದು ಪರಿಪಾಟ ಅನಾದಿ ಕಾಲದಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ.
ಇಲ್ಲಿ ದುಡಿಕೊಟ್ಟು ಹಾಡು ದೇವಿಯ ನಾಮಾ ಸಂಕೀರ್ತನೆಯಲ್ಲಿ ಬರುವ ಹಾಡಿನ ಸಾಲುಗಳಲ್ಲಿ ದೇವಿಯು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಸನ್ಮಂಗಳ ನೀಡಲೆಂದು ವಾದ್ಯಗಳು ನುಡಿಸಿಕೊಂಡು ಹಾಡುತ್ತಾರೆ ಎಂದು ಗ್ರಾಮಸ್ಥರಾದ ಅಲ್ಲಪ್ಪೀರ ಜುಮ್ರು ಅಯ್ಯಪ್ಪ ಹೇಳುತ್ತಾರೆ. ದುಡಿಕೊಟ್ಟು ನುಡಿಸುವವರಲ್ಲಿ ಐನಂಡ ಜಾಲಿ ಪೂಣಚ್ಚ, ದನೇಶ್, ಕುಶ, ಉಪ್ಪಂಗಡ ಕಿಟ್ಟು ಕರುಂಬಯ್ಯ, ಮತ್ತು ಇತರರು ಭಾಗವಹಿಸಿದ್ದರು.