ಕರಿಕೆ, ಮೆ 19: ಕಳೆದ ಹತ್ತು ವರ್ಷಗಳ ಹಿಂದೆ ಇಲ್ಲಿಗೆ ಸಮೀಪದ ಚೆತ್ತುಕಾಯ ಎಂಬಲ್ಲಿ ನಿರ್ಮಾಣಗೊಂಡ ಬರೂಕ ಜಲ ವಿದ್ಯುತ್ ಘಟಕದಿಂದಾಗಿ ಗ್ರಾಮದ ಹತ್ತಾರು ಮಂದಿ ಬದುಕು ಕಟ್ಟಿ ಕೊಂಡಿದ್ದಾರೆ. ಎರಡು ಸಾವಿರದ ಏಳನೇ ಇಸವಿಯಲ್ಲಿ ಬೆಂಗಳೂರು ಮೂಲದ ಬರೂಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಎಂಬ ಸಂಸ್ಥೆ ಕರಿಕೆಯಲ್ಲಿ ಸ್ಥಳ ಗುರುತಿಸಿ ಕಾಮಗಾರಿ ಪ್ರಾರಂಭಿಸಿತು. ಎರಡು ಸಾವಿರದ ಒಂಬತ್ತನೆಯ ಇಸವಿಯಲ್ಲಿ ಜಲ ವಿದ್ಯುತ್ ಘಟಕ ಸಿದ್ದಗೊಂಡು ಉದ್ಘಾಟನೆಗೊಂಡಿತ್ತು. ಹತ್ತು ಮೆಗಾವ್ಯಾಟ್ ಸಾಮಥ್ರ್ಯದ ಒಟ್ಟು ಎರಡು ಯಂತ್ರಗಳು ಜೂನ್ ತಿಂಗಳಿನಿಂದ ಜನವರಿ ತನಕ ಕಾರ್ಯ ನಿರ್ವಹಿಸುತ್ತಿದ್ದು, ಕರಿಕೆಯಿಂದ ಸುಳ್ಯ ಕೆವಿಜಿ ಆಸ್ಪತ್ರೆ ವರೆಗೆ ವಿದ್ಯುತ್ ಮಾರ್ಗ ಗುರುತಿಸಿ ಇದು ಹಾದು ಹೋಗುವ ಮಾರ್ಗದ ಗ್ರಾಮಸ್ಥರ ಜಾಗವನ್ನು ಸೂಕ್ತ ಮಾರುಕಟ್ಟೆ ದರ ನಿಗದಿಪಡಿಸಿ ಕರಾರು ಪತ್ರ ಮಾಡಿಕೊಂಡು ಸೂಕ್ತ ಪರಿಹಾರವನ್ನು ನೀಡಿರುತ್ತದೆ. ಮಡಿಕೇರಿ ತಾಲೂಕಿನ ಕರಿಕೆ ಗ್ರಾಮ ಪಂಚಾಯಿತಿ, ಪೆರಾಜೆ ಪಂಚಾಯಿತಿ ಹಾಗೂ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ನೂರೈವತ್ತು ಫಲಾನುಭವಿಗಳು ಇದರ ಲಾಭ ಪಡೆದಿದ್ದು, ಒಂದು ಸೆಂಟ್ ಜಮೀನಿಗೆ ಐದು ಸಾವಿರದಂತೆ ಕನಿಷ್ಟ ಒಂದೂವರೆ ಲಕ್ಷದಿಂದ ಒಂದು ಕೋಟಿ ರೂಪಾಯಿಗಳ ಪರಿಹಾರ ಪಡೆದುಕೊಂಡಿದ್ದಾರೆ. ಕಡು ಬಡವರು ಹಾಗೂ ಕೂಲಿ ಕಾರ್ಮಿಕರೆ ಹೆಚ್ಚಾಗಿರುವ ಈ ಊರಿನ ಜನತೆ ಇದರಿಂದಾಗಿ ಉತ್ತಮ ಮನೆ ನಿರ್ಮಾಣ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೇ ಈ ಭಾಗದಲ್ಲಿ ರಸ್ತೆ ಅಭಿವೃದ್ಧಿಪಡಿಸಿದ್ದು ವಾಹನ ಸುಗಮವಾಗಿ ಸಂಚರಿಸುವಂತಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಜಾಗಕ್ಕೆ ಮಾರುಕಟ್ಟೆ ದರ ದುಪ್ಪಟ್ಟಾಗಿದೆ. ಅಲ್ಲದೆ ಪ್ರವಾಸಿಗರು ಜಲ ವಿದ್ಯುತ್ ಘಟಕ ವೀಕ್ಷಿಸಲು ಕೇರಳದಿಂದ ಆಗಮಿಸುತ್ತಿರುವದರಿಂದ ಸ್ಥಳೀಯ ವ್ಯಾಪಾರ ವಹಿವಾಟು ಸುಗಮವಾಗಿ ಸಾಗುತ್ತಿದೆ. ಮೂವತ್ತು ಮಂದಿ ಸಿಬ್ಬಂದಿ ಹೊಂದಿರುವ ಈ ಕಂಪೆನಿಯಲ್ಲಿ ಸ್ಥಳೀಯ ಇಪ್ಪತ್ತೈದು ಮಂದಿ ಎಲೆಕ್ಟ್ರಿಷನ್, ಭದ್ರತಾ ಸಿಬ್ಬಂದಿ, ಪಿಟ್ಟರ್, ಸಹಾಯಕರಾಗಿ ಹತ್ತು ವರ್ಷಗಳಿಂದ ಖಾಯಂ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೇ ತುರ್ತು ಸಂದರ್ಭದಲ್ಲಿ ಸ್ಥಳೀಯ ಕಾರ್ಮಿಕರನ್ನು ದಿನಗೂಲಿ ಸಂಬಳದ ಆದಾರದ ಮೇಲೆ ಕೆಲಸಕ್ಕೆ ನಿಯುಕ್ತಿಗೊಳಿಸಲಾಗುತ್ತಿದ್ದು, ಇದರಿಂದ ಸ್ಥಳೀಯವಾಗಿ ಉದ್ಯೋಗ ಸಿಕ್ಕಿದಂತಾಗಿದೆ. ಸುಮಾರು ಇಪ್ಪತ್ತು ಎಕರೆ ವಿಸ್ತೀರ್ಣದಲ್ಲಿ ಜಲ ವಿದ್ಯುತ್ ಉತ್ಪಾದನಾ ಘಟಕ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಕಿರು ಅಣೆಕಟ್ಟು ಹೊಂದಿರುತ್ತದೆ. ಕರಿಕೆಯಿಂದ ಸುಳ್ಯದ ಕೆವಿಜಿ ಆಸ್ಪತ್ರೆಯ ಸಮೀಪದಲ್ಲಿರುವ ವಿದ್ಯುತ್ ಸಂಗ್ರಹಕ ಘಟಕಕ್ಕೆ ಮೂವತ್ತು ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಉತ್ಪಾದನೆಯಾದ ವಿದ್ಯುತ್ತನ್ನು ನೇರವಾಗಿ ಸುಳ್ಯಕ್ಕೆ ಸರಬರಾಜು ಮಾಡಲಾಗುತ್ತಿದ್ದು, ಈ ಬಗ್ಗೆ ಸರ್ಕಾರದೊಂದಿಗೆ ಇಪ್ಪತೈದು ವರ್ಷಗಳ ಒಪ್ಪಂದ ಪತ್ರದಂತೆ ಒಂದು ಯೂನಿಟ್‍ಗೆ ಎರಡುವರೆ ರೂಪಾಯಿಗಳಿಂದ ಮೂರು ರೂಪಾಯಿಗಳಂತೆ ಸಂಸ್ಥೆ ಪಡೆದುಕೊಳ್ಳುತ್ತಿದ್ದು, ನಂತರ ವಿದ್ಯುತ್ ಇಲಾಖೆಯ ಮೆಸ್ಕಾಂ ಇದನ್ನು ಸರಬರಾಜು ಮಾಡುತ್ತಿದೆ. ಒಂದು ವರ್ಷದಲ್ಲಿ ಗರಿಷ್ಠ ಹದಿನೆಂಟು ಮಿಲಿಯನ್ ಯುನಿಟ್ಸ್ ವಿದ್ಯುತ್ ಉತ್ಪಾದಿಸುತ್ತಿದ್ದು ಇದೀಗ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದು ಕೊಡಗಿನ ಕರಿಕೆ ಸೇರಿದಂತೆ ಮೈಸೂರು, ಹಾಸನ, ಮಂಡ್ಯ, ದ.ಕ. ಜಿಲ್ಲೆಯ ಧರ್ಮಸ್ಥಳ, ಹೊಸಪೇಟೆ ತಾಲೂಕುಗಳಲ್ಲಿ ಜಲ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿದ್ದರೆ, ಯಾದಗಿರಿ ಜಿಲ್ಲೆಯ ಶಹಪುರ, ನಾರಾಯಣಪುರ, ಚಿತ್ರದುರ್ಗದ ಹಿರಿಯೂರು, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಸೌರ ವಿದ್ಯುತ್ ಮತ್ತು ಗಾಳಿಯಿಂದ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಇದಲ್ಲದೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಈ ಸಂಸ್ಥೆ ಹಮ್ಮಿಕೊಂಡಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ, ಸ್ಥಳೀಯ ಸಂಘ-ಸಂಸ್ಥೆಗಳಿಗೆ ಧನ ಸಹಾಯ, ಕಟ್ಟಡ ನಿರ್ಮಾಣಕ್ಕೆ ಸಹಕಾರ, ಟೈಲರಿಂಗ್, ಕಂಪ್ಯೂಟರ್, ಹೈನುಗಾರಿಕಾ ತರಬೇತಿ, ಯೋಗ ತರಬೇತಿ, ಕ್ರೀಡಾಕೂಟ, ಧಾರ್ಮಿಕ ಆಚರಣೆಗಳಿಗೆ ಧನ ಸಹಾಯ ಹಾಗೂ ಶೌಚಾಲಯ ನಿರ್ಮಾಣ ಕಾರ್ಯವನ್ನು ಹಮ್ಮಿಕೊಂಡಿದೆ. ಸರಕಾರ ಇಂತಹ ಘಟಕಗಳಿಗೆ ಪ್ರೋತ್ಸಾಹ ನೀಡಿ ಪರಿಸರದ ಮೇಲೆ iÀiÁವದೇ ದುಷ್ಪರಿಣಾಮ ಉಂಟಾಗದಿರುವದರಿಂದ ಹೊಸ ಘಟಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ.

- ಹೊದ್ದೆಟ್ಟಿ ಸುಧೀರ್ ಕುಮಾರ್.