ಗೋಣಿಕೊಪ್ಪಲು, ಮೇ 19: ದೇಶದ ನಾಗರಿಕರ ಪ್ರಮುಖ ಸಂಪರ್ಕ ಸಾಧನವಾದ ಬಿಎಸ್‍ಎನ್‍ಎಲ್ ಕಚೇರಿಗಳು ಸಂಪರ್ಕದ ಕೊರತೆಯಿಂದ ಜನರಿಂದ ದೂರವಾಗುತ್ತಿದೆ. ಇದರಿಂದ ದೇಶದ ಹೆಮ್ಮೆಯ ಬಿಎಸ್‍ಎನ್ ಎಲ್ ಕೇಂದ್ರಗಳು ಸದ್ದಿಲ್ಲದೆ ಮುಚ್ಚುವ ಭೀತಿ ಎದುರಿಸುತ್ತಿವೆ.
ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಭರಾಟೆ ಎಲ್ಲೆಡೆ ಅಬ್ಬರಿಸುತ್ತಿದೆ. ಆದರೆ ಇದರ ತಳಪಾಯವಾದ ಬಿಎಸ್‍ಎನ್‍ಎಲ್ ಕಚೇರಿಗಳು ಸದ್ದಿಲ್ಲದೆ ಮುಚ್ಚುತ್ತಿವೆ. ಇವುಗಳ ನಡುವೆ ಸಮಸ್ಯೆಗೆ ಸಿಲುಕಿ ನಲುಗುತ್ತಿರುವವನು ಶ್ರೀಸಾಮಾನ್ಯ ಮಾತ್ರ.
ಬಿಎಸ್‍ಎನ್‍ಎಲ್ (ಭಾರತ್ ಸಂಚಾರ್ ನಿಗಮ) ಸರಕಾರದ ಕಚೇರಿಗಳಿಗೆ ಇಂಟರ್‍ನೆಟ್ ಸೌಲಭ್ಯ ಒದಗಿಸಿರುವ ದೇಶದ ಬಹು ದೊಡ್ಡ ಅಂತರ್ ಜಾಲ ಸಂಸ್ಥೆ. ಇದು ಹಿಂದೆ ದೂರವಾಣಿ ವಿನಿಮಯ ಕೇಂದ್ರ ಎಂಬ ಹೆಸರಿನಲ್ಲಿತ್ತು. 8 ವರ್ಷಗಳಿಂದ ಈಚೆಗೆ ಬಾರತ್ ಸಂಚಾರ್ ನಿಗಮ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸುವ ಈ ಇಲಾಖೆಯನ್ನು ನಂಬಿಯೇ ಕೇಂದ್ರ ಸರಕಾರ ಡಿಜಿಟಲ್ ಇಂಡಿಯಾ ಎಂಬ ಬಹು ದೊಡ್ಡ ಯೋಜನೆಯನ್ನು ರೂಪಿಸಿ ಹಳ್ಳಿ ಹಳ್ಳಿಗೂ ತಲುಪಿಸಲು ಮುಂದಾಗಿದೆ. ಇದರಿಂದಾಗಿ ಈಗ ಎಲ್ಲವೂ ಡಿಜಿಟಲೀಕರಣವಾಗಿದೆ. ಈಗ ಜನತೆ ಗ್ರಾಮ ಪಂಚಾಯಿತಿಯಿಂದ ವಾಸ ದೃಢೀರಣ ಪತ್ರ ಪಡೆಯಬೇಕಾದರೂ, ರೈತ ಆರ್‍ಟಿಸಿ ಪಡೆಯಬೇಕಾದರೂ ಇಂಟರ್‍ನೆಟ್ ಬೇಕೇ ಬೇಕು. ಇಂಟರ್‍ನೆಟ್ ಇಲ್ಲದಿದ್ದರೆ ಕೆಲಸವೇ ನಡೆಯುವದಿಲ್ಲ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶದ ಬಿಎಸ್‍ಎನ್‍ಎಲ್ ಕಚೇರಿಗಳು ಅಗತ್ಯ ಸೌಕರ್ಯಗಳು ಹಾಗೂ ಸಿಬ್ಬಂದಿಗಳಿಲ್ಲದೆ ರೋಗ ಪೀಡಿತವಾಗಿವೆ.
ಈ ಕಚೇರಿಗಳು ಕಾರ್ಯ ನಿರ್ವಹಿಸಬೇಕಾದರೆ ಮುಖ್ಯವಾಗಿ ಬೇಕಾಗಿರುವದು ಬ್ಯಾಟರಿ ಸೌಲಭ್ಯ. ಇವು ದಿನದ 24 ಗಂಟೆಯೂ ಸುಸ್ಥಿತಿಯಲ್ಲಿದ್ದು, ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಈ ಮೂಲಕ ಇಂಟರ್‍ನೆಟ್ ಹಾಗೂ ಫೋನ್‍ಗಳು ಕಾರ್ಯನಿರ್ವಹಿಸುತ್ತವೆ. ವಿದ್ಯುತ್ ಇರುವಾಗ ಸದಾ ಚಾರ್ಜ್ ಆಗುವ ಬ್ಯಾಟರಿಗಳಿಗೆ ವಿದ್ಯುತ್ ಕಡಿತಗೊಂಡಾಗ ಜನರೇಟ್ ಮೂಲಕ ಚಾರ್ಜ್‍ಗೊಳಿಸಬೇಕು. ಇಲ್ಲದಿದ್ದರೆ ಬ್ಯಾಟರಿ ಶಕ್ತಿ ಕುಂಠಿತಗೊಂಡು ಫೋನ್ ಆಗಲಿ, ಇಂಟರ್‍ನೆಟ್ ಆಗಲಿ ಕಾರ್ಯನಿರ್ವಸುವದಿಲ್ಲ. ಇಂತಹ ಸಂದರ್ಭದಲ್ಲಿ ಇಂಟರ್‍ನೆಟ್ ಅವಲಂಭಿಸಿರುವ ಸರಕಾರಿ ಕಚೇರಿಗಳ, ಬ್ಯಾಂಕ್‍ಗಳ ಕೆಲಸ ಸ್ಥಗಿತಗೊಳುತ್ತದೆ.
ಇಂತಹದ್ದೆ ಸಮಸ್ಯೆ ಈಗ ದಕ್ಷಿಣ ಕೊಡಗಿನ ಬಹುತೇಕ ಭಾಗಗಳಲ್ಲಿ ಉಂಟಾಗಿದೆ. ಬಾಳೆಲೆ, ತಿತಿಮತಿ, ಕಿರುಗೂರು, ಶ್ರೀಮಂಗಲ, ಹುದಿಕೇರಿ, ಪಾಲಿಬೆಟ್ಟ, ಪೊನ್ನಂಪೇಟೆ ಮೊದಲಾದ ಭಾಗಗಳಲ್ಲಿನ ಬಿಎಸ್‍ಎನ್‍ಎಲ್ ಕಚೇರಿಗಳು ಸಮರ್ಪಕÀವಾಗಿ ಕಾರ್ಯನಿರ್ವಹಿಸದೆ ಈ ಭಾಗದ ಜನತೆಗೆ ತುಂಬ ತೊಂದರೆಯಾಗಿದೆ.
ಅಷ್ಟೇ ಅಲ್ಲ. ಬ್ಯಾಂಕಿನಲ್ಲಿ ಕಂಪ್ಯೂಟರ್‍ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ತೊಂದರೆಯಾಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ಜನರ ಯಾವದೇ ಕೆಲಸಗಳು ನಡೆಯುತ್ತಿಲ್ಲ. 5 ನಿಮಿಷದ ಕೆಲಸಕ್ಕಾಗಿ ಅಮೂಲ್ಯ ಕೆಲಸ ಕಾರ್ಯಗಳನ್ನು ಬಿಟ್ಟು ಕಂಪ್ಯೂಟರ್ ಮುಂದೆ ದಿನವಿಡೀ ಕಾದು ಕುಳಿತುಕೊಳ್ಳಬೇಕಾಗಿದೆ. ಮತ್ತೊಂದು ಕಡೆ ಪೆಟ್ರೋಲ್ ಬ್ಯಾಂಕುಗಳಲ್ಲಿ ‘ಪೇಟಿಯಮ್’ಗೆ ತೊಂದರೆಯಾಗಿದೆ.
ಕೊಡಗಿನಂತಹ ಗುಡ್ಡಗಾಡು ಪ್ರದೇಶಕ್ಕೆ ಯಾವದೇ ಕಷ್ಟ ಸುಖಗಳನ್ನು ವಿನಿಮಯ ಮಾಡಿಕೊಳ್ಳುವದಕ್ಕೆ ಇರುವ ಪ್ರಮುಖ ಸಾಧನ ಸ್ಥಿರ ದೂರವಾಣಿ. ಈಗ ಇದಕ್ಕೂ ಸಂಚಕಾರ ಒದಗಿದೆ. ಯಾವದೇ ತುರ್ತು ಸಂದರ್ಭದಲ್ಲಿ ಅಗತ್ಯವಿರುವವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಬಿಎಸ್‍ಎನ್‍ಎಲ್ ಕಚೇರಿಯ ಸಿಬ್ಬಂದಿಗಳನ್ನು ವಿಚಾರಿಸಿದಾಗ ಅವರು ವಿದ್ಯುತ್ ಕಡಿತಗೊಂಡರೆ ಜನರೇಟರ್ ಆನ್ ಮಾಡುವದಕ್ಕೆ ಇಂಧನದ ಕೊರತೆಯಿದೆ. ಇಲಾಖೆ ಇಂಧನವನ್ನು ಪೂರೈಸುತ್ತಿಲ್ಲ. ಜತೆಗೆ ಸ್ಥಿರ ದೂರವಾಣಿಗಳನ್ನು ದುರಸ್ತಿಪಡಿಸಿವದಕ್ಕೂ ವೈರ್ ಮೊದಲಾದ ಅಗತ್ಯ ಸಲಕರಣೆಗಳಿಲ್ಲ. ಇದೆಲ್ಲಕ್ಕಿಂತ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಜೂನಿಯರ್ ಇಂಜಿನಿಯರ್ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇಂಟರ್‍ನೆಟ್ ಇದ್ದರೂ, ವೇಗವಿಲ್ಲ. ಮೊಬೈಲ್ ಸಂಪರ್ಕವಿದ್ದರೂ ಕೆಲವು ಕಡೆ ಸಿಕ್ಕುವದಿಲ್ಲ. ಈ ಎಲ್ಲಾ ಸಮಸ್ಯೆಗಳಿಂದ ಜನತೆ ಈಗ ಬಿಎಸ್‍ಎನ್‍ಎಲ್‍ಗೆ ಗುಡ್‍ಬೈ ಹೇಳಿ ಖಾಸಗಿ ಫೋನ್ ಸಂಪರ್ಕದತ್ತ ಮುಖ ಮಾಡಿದ್ದಾರೆ. ತಿತಿಮತಿ ಕೇಂದ್ರದಲ್ಲಿ 2 ವರ್ಷಗಳ ಹಿಂದೆ 300ಕ್ಕೂ ಹೆಚ್ಚು ಸ್ಥಿರ ದೂರವಾಣಿ ಸಂ¥ರ್ಕಗಳಿದ್ದವು. ಈಗ ಅದು ಕೇವಲ 20ಕ್ಕೆ ಇಳಿದಿದೆ. ದೂರವಾಣಿಗಳು ಕೆಟ್ಟು ಹೋದರೆ ದುರಸ್ತಿಪಡಿಸಲು ಜನರಿಲ್ಲ. ಹೀಗಾಗಿ ಜನತೆಯ ಹೆಮ್ಮೆಯ ಬಿಎಸ್‍ಎನ್‍ಎಲ್ ಕಚೇರಿ ಈಗ ಎಲ್ಲೆಡೆ ಬಾಗಿಲು ಮುಚ್ಚುನ ಹಂತ ತಲುಪಿದೆ.
ಈ ಬಗ್ಗೆ ಟಿಡಿಎಂ ಅವರನ್ನು ಸಂಪರ್ಕಸಿದರೆ ವೀರಾಜಪೇಟೆ ಕೇಂದ್ರ ಒಂದಕ್ಕೆ 75 ಸಾವಿರ ಮೌಲ್ಯದ ಇಂಧನ ನೀಡಲಾಗಿದೆ. ಆದರೆ ಹೆಚ್ಚಿನ ಅನುದಾನವಿಲ್ಲದ ಕಾರಣ ಎಲ್ಲಾ ಕೇಂದ್ರಗಳಿಗೆ ಇಂಧನ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ.
ಈ ಎಲ್ಲ ಕಾರಣದಿಂದ ಅನ್ಯ ಮಾರ್ಗವಿಲ್ಲದೆ ಗ್ರಾಹಕರು ಖಾಸಗಿ ಕಂಪನಿಗಳತ್ತ ಚಿತ್ತ ಹರಿಸಬೇಕಾದ ಅನಿವಾರ್ಯತೆ ಒದಗಿದೆ. ಜನತೆಯ ಹೆಮ್ಮೆಯ ದೂರವಾಣಿ ಕೇಂದ್ರವಾದ ಬಿಎಸ್‍ಎನ್‍ಎಲ್ ಸದ್ದಿಲ್ಲದೆ ಸದ್ದಡುಗುತ್ತಿದೆ. ಇದರಿಂದ ಗ್ರಾಹಕರಿಗೆ ಮಾತ್ರವಲ್ಲ ಸಾವಿರಾರು ನೌಕರರ ಉದ್ಯೋಗಕ್ಕೂ ಸಂಚಕಾರ ಬಿದ್ದಿದೆ. ದೇಶಕ್ಕೂ ನಷ್ಟವಾಗುತ್ತಿದೆ. ಇದರ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ಜನತೆಯ ಸಮಸ್ಯೆಯನ್ನು ನಿವಾರಿಸುವಂತಾಗಲಿ ಎಂಬದು ಸಾರ್ವಜನಿಕರ ಒತ್ತಾಯ.
-ಎನ್.ಎನ್.ದಿನೇಶ್