ಕುಶಾಲನಗರ, ಮೇ 19: ಪ್ರಕೃತಿಯ ಆರಾಧನೆಯೊಂದಿಗೆ ಉಳಿಸಿ ಬೆಳೆಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುದ್ದ ಪೂರ್ಣಿಮ ಅಂಗವಾಗಿ ಕುಶಾಲನಗರದ ಮಾತೆ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಜೀವನದಿ ಕಾವೇರಿಗೆ ನಡೆದ 94ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪ್ರಕೃತಿ ಮುನಿದರೆ ಮಾನವನ ಯಾವದೇ ಸಂಪತ್ತಿಗೂ ಉಳಿಗಾಲ ಇರುವದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ಅರಣ್ಯ ಇಲಾಖಾ ಕಾರ್ಯಕ್ರಮಗಳೊಂದಿಗೆ ನಾಗರಿಕರು ಕೈಜೋಡಿಸಿ ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್‍ಕುಮಾರ್ ಮಾತನಾಡಿ, ಸರಕಾರದ ಯೋಜನೆಗಳಿಗೆ ಕಾಯದೆ ನಾಗರಿಕರು ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಜಾಗೃತರಾಗಬೇಕೆಂದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ನದಿ ಪರಿಸರದ ಬಗ್ಗೆ ಜನರಿಗೆ ಅರಿವು, ಜಾಗೃತಿ ಮೂಡಿಸುವ ಮೂಲಕ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನದಿ ನೀರಿನ ಗುಣಮಟ್ಟ ಸುಧಾರಿಸಿರುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಗಳು ಹೊರಬಿದ್ದಿದ್ದು, ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ನೀರಿನ ಗುಣಮಟ್ಟ ಸಿ ದರ್ಜೆಯಿಂದ ಬಿ ದರ್ಜೆಗೆ ಮರಳಿರುವದು ಸಂತಸದ ವಿಷಯ ಎಂದರು.
ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಮಹಾ ಆರತಿ ಬೆಳಗಿದರು. ಕಾರ್ಯಕ್ರಮಕ್ಕೂ ಮುನ್ನಾ ನದಿ ತಟದಲ್ಲಿ ಗಿಡವನ್ನು ನೆಡಲಾಯಿತು.
ಉತ್ತಮ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಾದ ಡಿವೈಎಸ್ಪಿ ದಿನಕರ ಶೆಟ್ಟಿ, ವೃತ್ತ ನಿರೀಕ್ಷಕ ದಿನೇಶ್‍ಕುಮಾರ್, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ವಿವಿಧ ದೇವಾಲಯ ಸಮಿತಿಗಳ ಅಧ್ಯಕ್ಷರಾದ ಬಿ.ಪಿ. ಗಣಪತಿ, ಕೆ.ಕೆ.ದಿನೇಶ್, ಧರೇಶ್ ಬಾಬು, ರಾಮದಾಸ್, ಪ.ಪಂ. ಸದಸ್ಯ ವಿ.ಎಸ್. ಆನಂದಕುಮಾರ್, ಸಮಿತಿ ಪ್ರಮುಖರಾದ ಮಂಡೇಪಂಡ ಬೋಸ್ ಮೊಣ್ಣಪ್ಪ, ಕೆ.ಆರ್. ಶಿವಾನಂದನ್, ಡಿ.ಆರ್. ಸೋಮಶೇಖರ್, ಎಂ.ಬಿ. ಜೋಯಪ್ಪ, ವನಿತಾ ಚಂದ್ರಮೋಹನ್, ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ಕೆ.ಎಸ್. ಮೂರ್ತಿ, ಪಿ.ಪಿ. ಸತ್ಯನಾರಾಯಣ, ಡಿ.ಎಸ್. ಅಂಬರೀಷ್, ಕೃಷ್ಣ ಮತ್ತಿತರರು ಇದ್ದರು.
ಹುಣ್ಣಿಮೆ ಅಂಗವಾಗಿ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆಗೆ ಅಭಿಷೇಕ ಮತ್ತು ಆರತಿ ಬೆಳಗಲಾಯಿತು. ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಬಾರವಿ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಮತ್ತಿತರರು ಇದ್ದರು. ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.
ಕುಶಾಲನಗರ ಸಾಯಿ ಬಡಾವಣೆಯ ಸಾಯಿ ಮಂದಿರದಲ್ಲಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಾಯಿ ದೇವರಿಗೆ ಆರತಿ ಕಾರ್ಯಕ್ರಮ ನಡೆಯಿತು. ದೇವಾಲಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಿತು. ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.