‘
ಶನಿವಾರಸಂತೆ, ಮೇ 19: ಮಾನವನ ಅಂತರಂಗ - ಬಹಿರಂಗ ಶುದ್ಧಿಯಿಲ್ಲದೇ ಸಮಾಜ ಸುಧಾರಣೆ ಅಸಾಧ್ಯ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು. ಸಮೀಪದ ಹಂಡ್ಲಿ ಗ್ರಾಮದ ಗಣಪತಿ ದೇವಾಲಯದಲ್ಲಿ ನಡೆದ ಬಸವ ಜಯಂತಿ ಹಾಗೂ ಸಿದ್ಧಗಂಗಾ ಶ್ರೀಗಳು 112ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿಯೇ ಬಸವಣ್ಣ ಜಾತಿ - ಮತ ಬೇಧ ಭಾವವಿಲ್ಲ. ಮನುಷ್ಯರೆಲ್ಲಾ ಒಂದೇ ಎಂದು ಸಾರಿದ್ದರು. ಅಂದು ಸಮಾಜದಲ್ಲಿದ್ದ ಕಂದಾಚಾರ, ಜಾತೀಯತೆ, ಲಿಂಗ ತಾರತಮ್ಯದ ವಿರುದ್ಧ ಹೋರಾಡಿ ಸಮಾಜದಲ್ಲಿ ಸುಧಾರಣೆ ತಂದರು. ಅಂತರಂಗ - ಬಹಿರಂಗ ಶುದ್ಧಿಯ ಕಾಯಕದಿಂದ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಪ್ರತಿಪಾದಿಸಿದರು ಎಂದರು.
21ನೇ ಶತಮಾನದಲ್ಲಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣನವರಂತೆ ಸಮಾಜ ಸುಧಾರಣೆಯ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಿದ್ಧಗಂಗಾ ಮಠದಲ್ಲಿ ಜಾತಿಮತ ನೋಡದೆ ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹ ನೀಡಿದರು. ಆಧುನಿಕ ಬಸವಣ್ಣರೆನಿಸಿದ ಶ್ರೀಗಳು ತತ್ವಾದರ್ಶಗಳನ್ನು ಯುವಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಸದಾಶಿವ ಸ್ವಾಮೀಜಿ ಕರೆ ನೀಡಿದರು.
ಕಲ್ಲುಮಠದ ಮಹಾಂತ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಎಲ್ಲಾ ಕಾಯಕದವರನ್ನು ಒಂದುಗೂಡಿಸಿ ಅನುಭವ ಮಂಟಪ ಸ್ಥಾಪಿಸಿ ಸಮಾಜ ಸುಧಾರಣೆ ಮಾಡಿದ್ದರು. ಅಂತೆಯೇ ಸತ್ಯ ಮತ್ತು ಕಾಯಕ ನಿಷ್ಠೆಯಿಂದ ಸಿದ್ಧಗಂಗಾಶ್ರೀಗಳು ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದಾರೆ. ಜೀವಿತವಧಿಯಲ್ಲೇ ಸರಳ ಜೀವನದ ಮೂಲಕ ದೈವತ್ವದ ಭಾವನೆ ಬಿತ್ತಿದರು. ಸರ್ವ, ಜಾತಿ, ಧರ್ಮದವರನ್ನು ಕಂಡ ಮಹಾನುಭಾವ ಶಿವಕುಮಾರ ಸ್ವಾಮೀಜಿ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಕೆ.ಬಿ. ಹಾಲಪ್ಪ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ತಾಲೂಕು ಘಟಕದ ಅಧ್ಯಕ್ಷ ಮಹಾದೇವಪ್ಪ, ಮುಖಂಡರಾದ ಎಸ್.ಕೆ. ವೀರಪ್ಪ, ಕೆ.ವಿ. ಮಂಜುನಾಥ್, ಡಿ.ಬಿ. ಧರ್ಮಪ್ಪ, ಜಿ.ಎಂ. ಕಾಂತರಾಜ್, ಎನ್.ಕೆ. ರಾಜಪ್ಪ, ಡಿ.ಬಿ. ಸೋಮಪ್ಪ, ವೀರೇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.