ಬೇಸಿಗೆಯಲ್ಲಿ ದಾಹ ತಣಿಸಲು ಜನತೆ ಹತ್ತಾರು ಷರಬತ್ತು, ಪಾನೀಯಗಳ ಮೊರೆಹೋಗುವದು ಸರ್ವೆ ಸಾಮಾನ್ಯ. ಜನಸಾಮಾನ್ಯರು ಹಲಸಿನ ಹಣ್ಣನ್ನು ತಿನ್ನಲು ಬಳಸುವದು ಸಾಮಾನ್ಯ. ಆದರೆ, ಕೇರಳಿಯರು ಇಂತಹ ವಿಚಾರಗಳಲ್ಲಿ ಕೊಂಚ ಭಿನ್ನ. ಕಳೆದ ವರ್ಷ ಹಲಸನ್ನು “ರಾಜ್ಯ ಫಲ”ವೆಂದು ಘೋಷಣೆ ಮಾಡಿದ ಬಳಿಕ ಅಲ್ಲಿನ ಚಿತ್ರಣವೇ ಬದಲಾಗಿದೆ.
ಜನಪ್ರಿಯ ಪೇಯ
ಕೇರಳದಲ್ಲಿ “ಚಕ್ಕಶೇಕ್” ಅತ್ಯಂತ ಜನಪ್ರಿಯ ಪೇಯ. ಇದರಿಂದ ಹಲವು ರೋಗಗಳು ಪರಿಹಾರವಾಗಬಲ್ಲದು ಎಂದು ವೈದ್ಯರು ಹೇಳುವರು. ಇದರ ಪರಿಮಳವೇ ಎಂತಹವರ ಗಮನವನ್ನು ತನ್ನತ್ತ ಸೆಳೆಯಬಲ್ಲದು. ಕೇರಳ ರಾಜ್ಯದ ಸಾವಿರಾರು ಕೂಲ್‍ಬಾರ್‍ಗಳಲ್ಲಿ ಇದು ಧಾರಾಳ ಲಭ್ಯ. ಇಂತಹ ಹತ್ತಾರು ಔಷಧೀಯ ಗುಣಗಳನ್ನು ಹೊಂದಿರುವ ಹಲಸಿನ ಷರಬತ್ತು ಇದೀಗ ಜನಪ್ರಿಯತೆ ಪಡೆಯುತ್ತಿದೆ. ಕೇರಳದ ಹಲವಾರು ಊರುಗಳಲ್ಲಿ ಹಲಸಿನ ಷರಬತ್ತು ದಿನೇ ದಿನೇ ಜನಪ್ರಿಯವಾಗುತ್ತಿದೆ. ಟಿವಿ ಮಾಧ್ಯಮಗಳ ಅಡುಗೆ ಕಾರ್ಯಕ್ರಮಗಳಲ್ಲಿಯೂ ಈ ವಿಚಾರ ಭಾರೀ ಪ್ರಚಾರ ಪಡೆಯುತ್ತಿದೆ. ಹಲವಾರು ಕಂಪೆನಿಗಳು ಜನತೆಯ ಕೈಗೆಟುಕುವ ದರದಲ್ಲಿ ಹಲಸಿನ ಸ್ಕ್ವಾಷ್, ಟೆಟ್ರಾ ಪ್ಯಾಕ್‍ಗಳಲ್ಲಿ ಬಗೆಬಗೆಯ ಷರಬತ್ತು ಪೊಟ್ಟಣಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.
ಕೊಡಗಿನ ಹಲಸಿಗೂ ಬೇಡಿಕೆ
ಕೇರಳದ ಎರ್ನಾಕುಲಂನಲ್ಲಿ ಸುಮಾರು ಮೂರು ಸಾವಿರ ಕೂಲ್ ಬಾರ್‍ಗಳಿವೆ. ಕೊಡಗಿನ ನೆರೆಯ ಪಟ್ಟಣ ಕಣ್ಣಾನೂರಿನಲ್ಲಿ 50ಕ್ಕೂ ಅಧಿಕ ಕೂಲ್‍ಬಾರ್‍ಗಳಿವೆ. ಇಲ್ಲೆಲ್ಲಾ ಹಲಸಿನ ಮಿಲ್ಕ್‍ಶೇಕ್‍ಗೆ ಭಾರೀ ಬೇಡಿಕೆ. ಇದಕ್ಕೆ ಕೆಲವು ಕಡೆಗಳಲ್ಲಿ ಕೆಲ ಸಣ್ಣ ಹಲಸಿನ ತುಂಡುಗಳನ್ನು ಮಿಶ್ರಣ ಮಾಡಲಾಗುವದಂತೆ.
ಇದು ಸಾವಯವ ಮತ್ತು ರಾಸಾಯನಿಕ ರಹಿತವಾಗಿರುವದರಿಂದ ಈ ಪಾನಕಕ್ಕೆ ಪ್ರತೀ ವರ್ಷವೂ ಬೇಡಿಕೆ ಗಣನೀಯವಾಗಿ ಏರುತ್ತಿದೆಯಂತೆ ! ಪರಿಣಾಮ ಕರ್ನಾಟಕದ ಹಲಸಿಗೂ ಬೇಡಿಕೆ ಏರುತ್ತಿದೆ. ಕೊಡಗಿನಲ್ಲಿಯೂ ಹಲಸಿಗೆ ಬೇಡಿಕೆ ಏರಿದೆ. ವರ್ತಕರು ಮನೆ ಬಾಗಲಿಗೆ ಬಂದು ಹಲಸನ್ನು ಖರೀದಿಸುತ್ತಿರುವರು.
ಇತರ ಹಣ್ಣುಗಳಂತೆ ಹಲಸಿನ ಹಣ್ಣುಗಳಲ್ಲಿ ಪೌಷ್ಟಿಕಾಂಶಗಳು ಸಮೃದ್ಧವಾಗಿವೆ. ಇದರ ರಸವನ್ನು ಅಸ್ತಮಾ, ಹುಣ್ಣು, ಚರ್ಮದ ವಿವಿಧ ತೊಂದರೆಗಳು, ಅಧಿಕ ರಕ್ತದೊತ್ತಡ, ವಿವಿಧ ಕ್ಯಾನ್ಸರ್ ರೋಗಗಳಿಗೆ ಹೋರಾಡಲು ಬಳಸಲಾಗುತ್ತದೆ. ಅಜೀರ್ಣ, ನ್ಯುಮೋನಿಯಾ ಸೇರಿದಂತೆ ವಿವಿಧ ರೋಗಗಳ ಶಮನಕ್ಕೆ ಇದರ ರಸವು ನೆರವಾಗಲಿದೆ ಎಂದು ಹೇಳಲಾಗಿದೆ. ಆಯುಷ್ಯವನ್ನು ವರ್ಧಿಸಲೂ ಚೀನಿಯರು ಹಲಸಿನ ರಸವನ್ನು ಬಳಸುವರಂತೆ.
ರೋಗಗಳ ಉಪಶಮನಕಾರಿ
ಹಲಸಿನಲ್ಲಿ ಪೊಟ್ಯಾಶಿಯಂನ ಅಂಶವು ಹೇರಳವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ರಕ್ತದೊತ್ತಡ ನಿಯಂತ್ರಣಕ್ಕೆ ಪ್ರಯೋಜನಕಾರಿ ಎಂದು ಸಂಶೋಧನೆಗಳು ತಿಳಿಸಿವೆ. ಇದರಲ್ಲಿ ವಿಟಮಿನ್ ಎ ಅಧಿಕ ಪ್ರಮಾಣದಲ್ಲಿದೆ. ಇದನ್ನು ನಿಯಮಿತವಾಗಿ, ನಿರಂತರವಾಗಿ ಬಳಸುವದರಿಂದ ಚರ್ಮ ಹೊಳಪು ಪಡೆಯುತ್ತದೆ. ಸುಕ್ಕನ್ನು ತಡೆಯುವ ಶಕ್ತಿ ಹೊಂದಿರುವ ಹಲಸು ಸದಾ ಯೌವನಿಗರಂತೆ ಕಾಣಬೇಕೆಂಬ ಹಂಬಲ ಹೊಂದಿರುವವರಿಗೆ ವರದಾನ. ಇದರ ಬಳಕೆಯು ದೃಷ್ಟಿಶಕ್ತಿಯನ್ನು ವರ್ಧಿಸುತ್ತದೆ. ಇದು ಊರಿಯೂತದ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಅಧಿಕ ರಕ್ತದೊತ್ತಡದ ನಿವಾರಣೆಗೂ ಸಹಕಾರಿ. ರಾಸಾಯನಿಕ ಈ ಪೇಯವನ್ನು ನೀವು ಕುಡಿಯಲು ಆರಂಭಿಸಿದ್ದಲ್ಲಿ ಮತ್ತೆ, ಮತ್ತೇ ಕುಡಿಯಬೇಕೆಂಬ ಚಪಲ ಉಂಟಾಗುವದು ಖಚಿತ. ನೀವು ತಾಜಾ ಹಲಸಿನ ರಸವನ್ನು ಕುಡಿಯುವದಾದಲ್ಲಿ ಈ ರೀತಿ ಪ್ರಯತ್ನಿಸಿ ನೋಡಿ.
ಬೇಕಾಗುವ ಸಾಮಗ್ರಿಗಳು: 5-6 ತಾಜಾ ಮಾಗಿದ ಹಲಸಿನ ತೊಳೆಗಳು. 1 ಕಪ್ ನೀರು. 1/4 ಕಪ್ ತಂಪಾದ ಹಾಲು, ಐಸ್ ತುಂಡುಗಳು. ಒಂದು ಚಮಚ ಒಣದ್ರಾಕ್ಷಿ, ಪರಿಮಳಕ್ಕಾಗಿ ಏಲಕ್ಕಿ. ಹಲಸಿನ ತೊಳೆಗಳನ್ನು ನೀರು, ಹಾಲು, ಒಣದ್ರಾಕ್ಷಿ, ಏಲಕ್ಕಿಯೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಐಸ್ ತುಂಡುಗಳ ಮೇಲೆ ಸುರಿಯಿರಿ. ಚೆನ್ನಾಗಿ ಕದಡಿ ಸೋಸಿಕೊಳ್ಳಿ. ತಂಪಾಗಿಯೇ ಕುಡಿಯಲು ನೀಡಿ. ಈ ಪಾನೀಯ ನಿಮ್ಮನ್ನು ನಿಮ್ಮ ನೆಚ್ಚಿನವರನ್ನು ಸಂತೃಪ್ತಿ ಗೊಳಿಸುವದರಲ್ಲಿ ಸಂದೇಹವೇ ಇಲ್ಲ.
- ಕೂಡಂಡ ರವಿ, ಹೊದ್ದೂರು.