ಸೋಮವಾರಪೇಟೆ, ಮೇ 20: ಇತ್ತೀಚಿನ ವರ್ಷಗಳಲ್ಲಿ ಪೋಷಕರ ಅಸಡ್ಡೆಯಿಂದಾಗಿ ಹಲವಷ್ಟು ಸರ್ಕಾರಿ ಶಾಲೆಗಳು ಅವನತಿಯ ಹಾದಿ ತುಳಿದಿವೆ. ಸರ್ಕಾರಿ ಶಾಲೆಗಳೆಂದರೆ ಸೌಲಭ್ಯಗಳ ಕೊರತೆ ಎಂದು ಮೂಗು ಮುರಿಯುವವರೇ ಅಧಿಕ. ಆದರೆ ತಾಲೂಕಿನ ಯಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಎಲ್ಲಾ ಅಪವಾದಗಳಿಂದ ದೂರವಿದ್ದು, ಸುಸಜ್ಜಿತ ಸೌಕರ್ಯಗಳ ಆಗರವಾಗಿ ಗಮನ ಸೆಳೆದಿದೆ.
ಉತ್ತಮ ವಾತಾವರಣದಲ್ಲಿರುವ ಯಡೂರು ಸರ್ಕಾರಿ ಶಾಲೆ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಗೆ ಒತ್ತಿಕೊಂಡಂತೆ ಇದೆ. ಶಾಲೆಯಲ್ಲಿ ಒಂದನೇ ತರಗತಿ ಯಿಂದಲೇ ಇಂಗ್ಲೀಷ್ ಭಾಷಾ ಕಲಿಕೆ, ಚಟುವಟಿಕೆ ಆಧಾರಿತ ಸಂತಸ ಕಲಿಕೆಗೆ ಆದ್ಯತೆ ನೀಡಲಾಗಿದೆ. ಸುಸಜ್ಜಿತ ಕೊಠಡಿಗಳು, ಪಾಠೋಪಕರಣ, ಪೀಠೋಪಕರಣಗಳಿಂದ ಕೂಡಿರುವ ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯೂ ಇದೆ.
ಬೆಂಗಳೂರಿನ ಮೆಂಡಾ ಫೌಂಡೇಷನ್ ಮತ್ತು ಸೆಲ್ಕೋ ಕಂಪೆನಿ, ದಾನಿಗಳಾದ ಕಲ್ಕಂದೂರಿನ ರೋಹಿತ್ ನಂದಾವರ್ ಅವರುಗಳ ಸಹಕಾರ ದೊಂದಿಗೆ ರೂ. 70 ಸಾವಿರ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗಿದೆ. ಇದರೊಂದಿಗೆ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ಕಂಪ್ಯೂಟರ್ನ್ನು ಉಚಿತವಾಗಿ ನೀಡಿದ್ದು, ಪ್ರಾಥಮಿಕ ಹಂತದಲ್ಲಿಯೇ ಕಂಪ್ಯೂಟರ್ ಬಗ್ಗೆ ಮಕ್ಕಳಿಗೆ ಜ್ಞಾನ ಮೂಡಿಸಲಾಗುತ್ತಿದೆ.
ಇದರೊಂದಿಗೆ ಮಕ್ಕಳ ಕಲಾಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಬೆಂಗಳೂರಿನ ಇಂಜಿನಿಯರ್ ನಿಶಾಂತ್ ಅವರು ಉಚಿತವಾಗಿ ಧ್ವನಿವರ್ಧಕ ನೀಡಿದ್ದಾರೆ. ಜತೆಗೆ ಗ್ರೀನ್ ಬೋರ್ಡ್, ಆಡಿಯೋ ಪ್ಲೇಯರ್, ಊಟದ ತಟ್ಟೆಗಳು, ಸುಸಜ್ಜಿತ ಅಡುಗೆ ಕೋಣೆ, ಸಂಪೂರ್ಣ ವಿದ್ಯುತ್ ವ್ಯವಸ್ಥೆ, ಸಭಾಂಗಣ, ಮೈದಾನ, ವೇದಿಕೆ, ಸುಸಜ್ಜಿತ ಶೌಚಾಲಯ, ನಲಿಕಲಿ ಕೊಠಡಿ, ಗ್ರಂಥಾಲಯ, ಶುದ್ಧ ಕುಡಿಯುವ ನೀರಿನ ಸೌಕರ್ಯ, ಶಾಲಾ ಮುಂಭಾಗ ಹೂದೋಟ.. ಹೀಗೆ ಹಲವು ವ್ಯವಸ್ಥೆಗಳೊಂದಿಗೆ ಯಡೂರು ಸರ್ಕಾರಿ ಶಾಲೆ ಕಂಗೊಳಿಸುತ್ತಿದೆ.
ಇದರೊಂದಿಗೆ ಸರ್ಕಾರದ ವಿವಿಧ ಯೋಜನೆಗಳಾದ ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಧನ, ಆರೋಗ್ಯ ತಪಾಸಣೆ, ಸಮವಸ್ತ್ರ, ಉಚಿತ ಪಠ್ಯಪುಸ್ತಕ ವಿತರಣೆ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳು ಎಲ್ಲಾ ಶಾಲಾ ಮಕ್ಕಳಂತೆಯೇ ಈ ಶಾಲೆಯ ವಿದ್ಯಾರ್ಥಿಗಳಿಗೂ ಲಭಿಸುತ್ತಿವೆ.
1955ರಲ್ಲಿ ಗ್ರಾಮಸ್ಥರ ಪರಿಶ್ರಮದಿಂದ ಸಣ್ಣ ಹುಲ್ಲಿನ ಗುಡಿಸಲಿನಲ್ಲಿ ಪ್ರಾರಂಭವಾದ ಯಡೂರು ಶಾಲೆಯಲ್ಲಿ ಅಂದಿನ ದಿನಗಳಲ್ಲಿ 30 ವಿದ್ಯಾರ್ಥಿಗಳು ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುತ್ತಿದ್ದರು. ನಂತರದ ದಿನಗಳಲ್ಲಿ 1 ರಿಂದ 7ನೇ ತರಗತಿವರೆಗೆ ಸುಮಾರು 300 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು.
ಇದೀಗ ಶಾಲೆಯಲ್ಲಿ ಕೇವಲ 36 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಪ್ರಸ್ತುತ 4 ಮಂದಿ ಶಿಕ್ಷಕರು, ನಿಯೋಜನೆ ಮೇರೆ ಓರ್ವ ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲಾ ಸೌಕರ್ಯಗಳಿದ್ದರೂ ಸಹ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕ ವರ್ಗದಲ್ಲಿದೆ. ಇದಕ್ಕಾಗಿಯೇ ಸುತ್ತಮುತ್ತಲಿನ ಅಂಗನವಾಡಿ, ಗ್ರಾಮಗಳಿಗೆ ತೆರಳಿ ‘ನಿಮ್ಮ ಮಗುವಿನ ಕನಸು ನಮ್ಮ ಶಾಲೆಯಲ್ಲಿ ನನಸು’ ಎಂಬ ಘೋಷ ವಾಕ್ಯದಡಿ ಮಕ್ಕಳ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪ್ರೇಮಾ ತಿಳಿಸಿದ್ದಾರೆ. ಒಟ್ಟಾರೆ ಎಲ್ಲಾ ಮೂಲಭೂತ ಸೌಕರ್ಯ ಗಳೊಂದಿಗೆ ಆಧುನಿಕ ಸೌಲಭ್ಯಗಳನ್ನೂ ಒಳಗೊಂಡಿರುವ ಯಡೂರು ಸರ್ಕಾರಿ ಶಾಲೆ ಉಳಿಯ ಬೇಕಾದರೆ ಮಕ್ಕಳ ದಾಖಲಾತಿಯೇ ತಳಪಾಯ ವಾಗಿದೆ. ಯಾವದೇ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲದಂತೆ ರೂಪುಗೊಂಡಿರುವ ಯಡೂರು ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ, ಶಿಕ್ಷಣ ಕಲಿಕೆಗೆ ಪೂರಕವಾದ ವಾತಾವರಣದಲ್ಲಿದೆ.
- ವಿಜಯ್ ಹಾನಗಲ್