ಶನಿವಾರಸಂತೆ, ಮೇ 20: ಇದು ಪ್ಲಾಸ್ಟಿಕ್ ಯುಗ ಎಲ್ಲದಕ್ಕೂ ಪ್ಲಾಸ್ಟಿಕ್ ಬಳಕೆಯೇ ಹೆಚ್ಚು ಇಂದು ಈ ಪ್ಲಾಸ್ಟಿಕ್ ಭೂ ಮಾಲಿನ್ಯಕ್ಕೆ ಪ್ರಮುಖ ಮೂಲವಾಗಿ ಪರಿಣಮಿಸಿದೆ. ಇದರ ವ್ಯವಸ್ಥಿತ ಸಾಗಣೆ ಪೌರಾಡಳಿತಕ್ಕೊಂದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಇತರ ತ್ಯಾಜ್ಯಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಡಿಸಿ ಪುರ್ನಬಳಕೆ ಯಾಗುತ್ತಿದ್ದರೂ, ಪ್ಲಾಸ್ಟಿಕ್ ತ್ಯಾಜ್ಯಗಳು ಹೆಚ್ಚುತ್ತಲೇ ಇದೆ ಯಾವದೇ ಕಾರ್ಯಕ್ರಮ ನಡೆದರೂ, ಮರುದಿನ ಕಂಡು ಬರುವ ಪ್ಲಾಸ್ಟಿಕ್ ತ್ಯಾಜ್ಯ ಇತರ ತ್ಯಾಜ್ಯಗಳಿಗಿಂತ ಎಷ್ಟೋ ಪಟ್ಟು ಹೆಚ್ಚಾಗಿರುತ್ತದೆ. ನಗರ ಪ್ರದೇಶಗಳ ಸೌಂದರ್ಯ ಹಾಳು ಮಾಡುವದರಲ್ಲಿ ಇದು ಬಹುದೊಡ್ಡ ಪಾತ್ರ ನಿರ್ವಹಿಸುತ್ತಿದೆ ಪ್ರಾಣಿ ಪಕ್ಷಿಗಳ ಹೊಟ್ಟೆ ಸೇರಿದ ಪ್ಲಾಸ್ಟಿಕ್ ಅವುಗಳ ಜೀವವನ್ನೆ ಬಲಿ ತೆಗೆದ ಎಷ್ಟೋ ನಿದರ್ಶನಗಳು ನಮ್ಮ ಮುಂದಿದ್ದರೂ ಜನರಲ್ಲಿ ಇನ್ನೂ ಕೂಡ ಜಾಗೃತಿ ಬಂದಿಲ್ಲ. ಕೆಲ ಜಿಲ್ಲಾಡಳಿತಗಳು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ ಬಳಕೆದಾರರಿಗೆ ದಂಡ ವಿಧಿಸುವ ಆದೇಶ ಹಾಕಿದ್ದರೂ, ಜನ ಅನಿವಾರ್ಯವೆಂಬಂತೆ ಈಗಲೂ ಅದನ್ನು ಬಳಸುತ್ತಿದ್ದಾರೆ. ಬಳಸಿ ಬಿಸಾಡುವ ಅಸಂಖ್ಯ ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲ್ಗಳು ಪರಿಸರವನ್ನು ಹಾಳು ಮಾಡುತ್ತಿದೆ. ಆದರೆ, ಇಲ್ಲಿಗೆ ಸಮೀಪದ ಮುಳ್ಳೂರು ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಸಹಕಾರದೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಇಟ್ಟಿಗೆಗಳನ್ನು ತಯಾರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಅನುಪಯುಕ್ತವಾಗಿ ಬಿಸಾಡಿದ ಹಳೆಯ ಪ್ಲಾಸ್ಟಿಕ್ಗಳನ್ನು ಸಂಗ್ರಹಿಸಿ ಅವುಗಳನ್ನು ಮರದ ಹಲಗೆಯಿಂದ ತಯಾರಿಸಿದ ಇಟ್ಟಿಗೆಯ ಮಾದರಿಯ ಅಚ್ಚಿನ ಬಾಕ್ಸ್ ತಯಾರಿಸಿಕೊಂಡು ಅದರ ಮೇಲ್ಭಾಗದಲ್ಲಿ ಅಲ್ಲಲ್ಲಿ ದುಂಡನೆಯ ಪೀನ ಮಸೂರದ ಕನ್ನಡಿಯನ್ನು (ಭೂತಗನ್ನಡಿ) ಅಳವಡಿಸುವದು, ಇದು ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಿ ಶಾಖವನ್ನು ಪೆಟ್ಟಿಗೆಯೊಳಗೆ ಪಸರಿಸುತ್ತದೆ.ಈ ಶಾಖವು ಒಳಭಾಗದಲ್ಲಿರುವ ಪ್ಲಾಸ್ಟಿಕ್ ಗಳನ್ನು ಜಿನುಗುವಂತೆ (ಮೆಲ್ಟ್)ಮಾಡುತ್ತದೆ ಹೀಗೆ ಹಲವಾರು ಪ್ಲಾಸ್ಟಿಕ್ ವಸ್ತುಗಳು ಜಿನುಗಿ ಇಟ್ಟಿಗೆಯಾಗಿ ರೂಪುಗೊಳ್ಳುತ್ತದೆ. ಮರದ ಅಚ್ಚಿನ ಸುತ್ತ ಮರಳು ಮತ್ತು ಕಲ್ಲಿನ ಪುಡಿಯ ಮಿಶ್ರಣವನ್ನು ಸವರಿದರೆ ಇಟ್ಟಿಗೆಯ ಅಂಚುಗಳಲ್ಲಿ ಅದು ಅಂಟಿಕೊಂಡು ಗಾರೆ ಅಥವಾ ಗಮ್ ಇಟ್ಟಿಗೆಗಳು ಒಂದಕ್ಕೊಂದು ಬಿಗಿಯಾಗಿ ಅಂಟಲು ನೆರವಾಗುತ್ತದೆ.ಇವುಗಳನ್ನು ಸರಳ ಗೂಡುಗಳನ್ನು ಕಟ್ಟಲು ಗಿಡಗಳಿಗೆ ಬದುಗಳನ್ನು ನಿರ್ಮಿಸಲು, ಇಂಟರ್ಲಾಕ್ಗಳನ್ನು ನೆಲಕ್ಕೆ ಹಾಸಿ ಮಣ್ಣಿನ ಸವಕಳಿಯನ್ನು ತಡೆಯಬಹುದಾಗಿದೆ. ಪ್ಲಾಸ್ಟಿಕ್ಗಳನ್ನು ನೇರವಾಗಿ ಗಾಳಿಯ ಸಂಪರ್ಕದಲ್ಲಿ ಸುಟ್ಟರೆ ಯೆಥೇಚ್ಛವಾದ ಇಂಗಾಲ ಗಾಳಿಯನ್ನು ಸೇರುತ್ತದೆ. ಅಲ್ಲದೆ ರಾಸಾಯನಿಕಗಳು ಕೂಡ ವಾಯು ಸೇರಿ ವಾಯು ಮಾಲಿನ್ಯವಾಗುತ್ತದೆ ಓಜೋನ್ ಪದರಕ್ಕೆ ಹಾನಿ ಮಾಡುತ್ತದೆ ಆದರೆ ಇಲ್ಲಿ ಪೀನ ಮಸೂರ ಬಳಸಿ ಸೂರ್ಯನ ಶಾಖದಿಂದ ಪ್ಲಾಸ್ಟಿಕ್ ಸುಡಲಾಗುತ್ತದೆ. ಆಮ್ಲಜನಕದ ಪೂರೈಕೆ ಇಲ್ಲದಿರುವದರಿಂದ ಬೆಂಕಿ ಹತ್ತುವದಿಲ್ಲ. ಕೇವಲ ಶಾಖದಿಂದಲೇ ಅದು ಸುಡುತ್ತದೆ ಒಳಗ್ಗಿನಿಂದ ವಾಯು ಹೊರಬರುವದಿಲ್ಲ ಇದರಿಂದ ವಾಯು ಕೂಡ ಮಾಲಿನ್ಯಗೊಳ್ಳುವದಿಲ್ಲ ಎನ್ನುತ್ತಾರೆ ಶಿಕ್ಷಕರು ಉತ್ತಮ ದರ್ಜೆಯ ಹೆಚ್ಚು ಶಾಖವನ್ನು ಉತ್ಪಾದಿಸಬಲ್ಲ ಬಹು ಸಾಂದ್ರತೆಯ ಪೀನ ಮಸೂರವನ್ನು ಬಳಸಿ ಇದನ್ನು ಇನ್ನೂ ಉತ್ತಮವಾಗಿ ವ್ಯವಸ್ಥೆಗೊಳಿಸಬಹುದು ಎಂದು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇಟ್ಟಿಗೆಯ ಮಾದರಿಯಲ್ಲಿಯೇ ಇಂಟರ್ಲಾಕ್ಗಳ ಮಾದರಿಯ ಅಚ್ಚುಗಳನ್ನು ಸಿದ್ಧಪಡಿಸಿಕೊಂಡರೆ ಪ್ಲಾಸ್ಟಿಕ್ ಇಂಟರ್ಲಾಕ್ ಕೂಡ ಉತ್ಪಾದಿಸಿ ಬಳಸಬಹುದೆಂದು ಅವರು ಹೇಳುತ್ತಾರೆ.