ಸೋಮವಾರಪೇಟೆ, ಮೇ 19: ಇಲ್ಲಿನ ತಾಲೂಕು ಕಚೇರಿಯ ಅವ್ಯವಸ್ಥೆಗಳನ್ನು ಮುಂದಿನ ಒಂದು ವಾರದೊಳಗೆ ಬಗೆಹರಿಸಿದ್ದರೆ ಬೆಳೆಗಾರರ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ತಿಳಿಸಿದ್ದಾರೆ. ಇಲ್ಲಿನ ತಾಲೂಕು ಕಚೇರಿ ಕಟ್ಟಡ ದುಸ್ಥಿತಿಗೆ ತಲುಪಿದ್ದು, ಮಳೆಗಾಲದಲ್ಲಿ ನೀರು ಸೋರಿಕೆಯಾಗಿ ಹಲವಷ್ಟು ಕಡತಗಳು ನಾಶವಾಗುತ್ತಿವೆ. ಇದರೊಂದಿಗೆ ಕಂಪ್ಯೂಟರ್‍ಗಳೂ ಸಹ ಮಳೆನಿಂದ ಹಾನಿಗೀಡಾಗುತ್ತಿದ್ದು, ಇದು ಹೀಗೆಯೇ ಮುಂದುವರೆದರೆ ಒಂದೆರಡು ವರ್ಷದಲ್ಲಿ ಇಡೀ ಕಟ್ಟಡವೇ ನೆಲಕ್ಕಚ್ಚಬಹುದಾಗಿದೆ.

ಈ ಬಗ್ಗೆ ಅನೇಕ ಬಾರಿ ಸಂಬಂಧಿಸಿದವರ ಗಮನ ಸೆಳೆದಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಮುದ್ದಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲೂಕು ಕಚೇರಿ ಕಟ್ಟಡ ದುರಸ್ತಿಗೆ 70 ಲಕ್ಷ ಅನುದಾನ ಮಂಜೂರಾಗಿದೆ. ಆದರೆ ದುರಸ್ತಿ ಕಾರ್ಯ ಇದುವರೆಗೂ ಪ್ರಾರಂಭ ವಾಗಿಲ್ಲ. ಮಳೆಗಾಲದಲ್ಲಿ ಸಿಬ್ಬಂದಿ ಗಳೂ ಸಹ ಕಚೇರಿ ಒಳಗೆ ಕುಳಿತು ಕೊಳ್ಳಲು ಸಾಧ್ಯವಾಗುವದಿಲ್ಲ. ಇನ್ನು ಬೆಳೆಗಾರರ ಕೆಲಸ ಕಾರ್ಯಗಳಿಗೆ ಸ್ಪಂದಿಸುವದಾದರೂ ಹೇಗೆ? ಈ ನಿಟ್ಟಿನಲ್ಲಿ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ಒತ್ತಾಯಿಸಿ ದ್ದಾರೆ. ಇದರೊಂದಿಗೆ ತಾಲೂಕು ಕಚೇರಿಯಲ್ಲಿ 6 ರೆವಿನ್ಯೂ ಇನ್ಸ್‍ಪೆಕ್ಟರ್, 1 ಶಿರಸ್ತೇದಾರ್ ಸೇರಿದಂತೆ ಡಿ.ಟಿ. ಹುದ್ದೆಗಳು ಖಾಲಿ ಉಳಿದಿದ್ದು, ತಕ್ಷಣ ನಿಯೋಜನೆಗೆ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.