ನವದೆಹಲಿ, ಮೇ 19 : ಕಳೆದ ಒಂದೂವರೆ ತಿಂಗಳಿನಿಂದ ನಡೆದ ಮತ ಭಾರತ ಸಮರ ಭಾನುವಾರ ಕೊನೆಗೊಂಡಿದೆ. ಈಗ ಮತದಾನಕ್ಕಿಂತ ಎಲ್ಲರ ಕಣ್ಣು ಮತದಾನೋತ್ತರ ಸಮೀಕ್ಷೆಯ ಮೇಲೆ ನೆಟ್ಟಿದೆ. ತಾ.23 ರಂದು ದೇಶದ 543 ಲೋಕಸಭಾ ಕ್ಷೇತ್ರಗಳ ಅಧಿಕೃತ ಫಲಿತಾಂಶ ಪ್ರಕಟಗೊಳ್ಳಲಿದೆ. ಮತದಾನದ ಕೊನೆಯ ದಿನವಾದ ಭಾನುವಾರದಂದು ಪ್ರಕಟಗೊಂಡ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಬಹುತೇಕ ಸಮೀಕ್ಷೆಗಳು ಬಿ.ಜೆ.ಪಿ ಏಕೈಕ ಅಧಿಕ ಸ್ಥಾನಗಳನ್ನು ಗಳಿಸುವ ಕುರಿತು ಖಾತರಿಪಡಿಸಿವೆ. 2014 ರ ಚುನಾವಣಾ ಫಲಿತಾಂಶದಲ್ಲಿ ಗಳಿಸಿದಷ್ಟು ಅತ್ಯಧಿಕ ಸ್ಥಾನಗಳು ಈ ಬಾರಿ ಬಿಜೆ.ಪಿಗೆ ಅಲಭ್ಯವಾಗಲಿದೆ. ಆದರೆ, ಬಿಜೆಪಿಯು ಮೈತ್ರಿಕೂಟವಾದ ಎನ್ಡಿಎ ಒಕ್ಕೂಟದೊಂದಿಗೆ ಕೇಂದ್ರದಲ್ಲಿ ದ್ವಿತೀಯ ಬಾರಿ ಸರಕಾರ ರಚಿಸುವ ಸಾಧ್ಯತೆ ಹೆಚ್ಚಿದೆ. ಆದರೆ, ಒಂದು ಸಮೀಕ್ಷೆ ಮಾತ್ರ ಎನ್ಡಿಎಗೆ ಸರಳ ಬಹುಮತವೂ ಲಭ್ಯವಾಗುವದಿಲ್ಲ ಎಂದು ಬಹಿರಂಗಪಡಿಸಿದೆ. ಇನ್ನಿತರ ಎಲ್ಲ ಸಮೀಕ್ಷೆಗಳಲ್ಲಿ ಎನ್ಡಿಎ ಸ್ಪಷ್ಟ ಬಹುಮತ ಸಾಧಿಸುವ ಕುರಿತು ವಿವರಿಸಲಾಗಿದೆ.ಈ ನಡುವೆ ಬಹುತೇಕ ಸಮೀಕ್ಷೆಗಳು ಕರ್ನಾಟಕದಲ್ಲಿ ಬಿಜೆಪಿಗೆ ಒಟ್ಟು 28 ಕ್ಷೇತ್ರಗಳಲ್ಲಿ 18 ಕ್ಕಿಂತ ಹೆಚ್ಚಿನ ಸ್ಥಾನ ಲಭ್ಯವಾಗುವ ನಿರೀಕ್ಷೆ ಕುರಿತು ಮಾಹಿತಿ ನೀಡಿವೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟ 11 ಕ್ಕಿಂತ ಹೆಚ್ಚು ಸ್ಥಾನ ಗಳಿಸುವದು ಆಸಾಧ್ಯ ಎಂದಿವೆ.ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಟೈಮ್ಸ್ನೌ- ಸಿವಿಎಂಆರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 21, ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ 7 ಸ್ಥಾನ ದೊರೆಯಲಿದೆ. ಸಿ ವೋಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ 18, ಕಾಂಗ್ರೆಸ್ 7, ಜೆಡಿಎಸ್ 2 ಸ್ಥಾನ ಗಳಿಸಲಿದ್ದು ಪಕ್ಷೇತರರು 1 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ.
ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಬಿಜೆಪಿ 21 ರಿಂದ 25, ಕಾಂಗ್ರೆಸ್ 3 ರಿಂದ 6, ಜೆಡಿಎಸ್ 1 ರಿಂದ 3 ಹಾಗೂ ಪಕ್ಷೇತರ 1 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ ಈ ಬಾರಿಯೂ ಬಿಜೆಪಿ ತನ್ನ ಹಿಂದಿನ ಸಾಧನೆಯನ್ನೇ ಮುಂದುವರಿಸುವ ನಿರೀಕ್ಷೆ ಇದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 16, ಕಾಂಗ್ರೆಸ್ 10 ಹಾಗೂ ಜೆಡಿಎಸ್ 2 ಸ್ಥಾನ ಗಳಿಸಿದ್ದವು.
ಲೋಕಸಭಾ ಚುನಾವಣೋತ್ತರ ಬಹುತೇಕ ಸಮೀಕ್ಷೆಗಳ ಅನ್ವಯ ದೇಶದಲ್ಲಿ ಎನ್ಡಿಎಗೆ ಬಹುಮತ ದೊರಕುವ ಸಾಧ್ಯತೆಯಿದೆ. ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ.
ಸಿ-ವೋಟರ್ ಸಮೀಕ್ಷೆಯ ಪ್ರಕಾರ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಎನ್ಡಿಎ 287, ಯುಪಿಎ
128 ಹಾಗೂ ಇತರ 127 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ಇರುವದಾಗಿ ನಿರೀಕ್ಷಿಸಲಾಗಿದೆ.
ಸಿ-ವೋಟರ್, ಟೈಮ್ಸ್ ನೌ ಹಾಗೂ ಇನ್ನಿತರ ಬಹುತೇಕ ಸಂಸ್ಥೆಗಳ ಸಮೀಕ್ಷೆಯ ಪ್ರಕಾರ ಒಟ್ಟು 543 ಸ್ಥಾನಗಳ ಪೈಕಿ ಎನ್ಡಿಎ ಸರಳ ಬಹುಮತವಾದ 272 ರ ‘ಮ್ಯಾಜಿಕ್ ನಂಬರ್’ ಅನ್ನು ಸುಲಭವಾಗಿ ದಾಟಲಿದ್ದು ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವದು ನಿಚ್ಚಳವಾಗಿದೆ.
ನ್ಯೂಸ್ ಎಕ್ಸ್ ಸಮೀಕ್ಷೆಯ ಪ್ರಕಾರ ಮಾತ್ರ ಎನ್ಡಿಎಗೆ 242, ಯುಪಿಎಗೆ 162, ಹಾಗೂ ಇತರರು 130 ಸ್ಥಾನ ಗಳಿಸಲಿದ್ದು ಎನ್ಡಿಎಗೆ ಸರಳ ಬಹುಮತವೂ ಲಭ್ಯವಾಗುವದಿಲ್ಲ.
ಇನ್ನು ಟೈಮ್ಸ್ ನೌ ಪ್ರಕಾರ ಎನ್ಡಿಎಗೆ 306, ಯುಪಿಎಗೆ 132, ಇತರರು 104 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. ಉಳಿದ ಸಮೀಕ್ಷೆಯ ವಿವರ ಹೀಗಿದೆ.
ಚಾಣಕ್ಯ ಸಂಸ್ಥೆಯ ಸಮೀಕ್ಷೆಯನ್ವಯ ಎನ್ಡಿಎ 340, ಯು.ಪಿಎ 70 ಹಾಗೂ ಇತರರು 133; ಎಬಿಪಿ ನ್ಯೂಸ್ ಪ್ರಕಾರ ಎನ್ಡಿಎ 336 ಯುಪಿಎ 55 ಹಾಗೂ ಇತರರು 148 ಸ್ಥಾನ ಗಳಿಸಲಿದ್ದಾರೆ.
ಟೈಮ್ಸ್ ನೌ-ಸಿಎನ್ ಎಕ್ಸ್ ಸಮೀಕ್ಷೆ ಪ್ರಕಾರ ಎನ್ಡಿಎ 306, ಯುಪಿಎ 132 ಹಾಗೂ ಇತರರು 104. ರಿಪಬ್ಲಿಕ್ ಭಾರತ್- ಜನ್ ಕೀ ಭಾತ್ ಪ್ರಕಾರ ಎನ್ಡಿಎ 305, ಯುಪಿಎ 124 ಹಾಗೂ ಇತರರು 113.
ಪೋಲ್ ಆಫ್ ಪೋಲ್ಸ್ ನಲ್ಲಿಯೂ ಸಹ ಎನ್ಡಿಎಗೆ ಅಧಿಕಾರ ಸಿಗುವದು ನಿಚ್ಚಳವಾಗಿದ್ದು, ಎನ್ಡಿಎಗೆ 296 ಸ್ಥಾನ ದೊರೆತರೆ, ಯುಪಿಎಗೆ 126, ಇತರರು 120 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ.
ಎನ್ಡಿಟಿವಿ ಸಮೀಕ್ಷೆಯನ್ವಯ ಎನ್ಡಿಎ 306, ಯುಪಿಎ 132 ಹಾಗೂ ಇತರರು 94 ಸ್ಥಾನ ಪಡೆಯುವ ಸಾಧ್ಯತೆಯಿದೆ. ಇಂಡಿಯಾ ಟುಡೇಯನ್ವಯ ಎನ್ಡಿಎ 339-365, ಯುಪಿಎ 77-108 ಹಾಗೂ ಇತರರು 69-95 ಸ್ಥಾನಗಳನ್ನು ಪಡೆಯಲಿದ್ದಾರೆ.