ನಾಪೆÇೀಕ್ಲು, ಮೇ 19: ಕಾಫಿ ತೋಟದಲ್ಲಿ ಮರ ಕಪಾತು ಮಾಡುವ ಸಮಯದಲ್ಲಿ 11 ಕೆ.ವಿ.ವಿದ್ಯುತ್ ತಂತಿಗೆ ಅಲ್ಯುಮಿನಿಯಂ ಏಣಿ ತಗುಲಿದ ಪರಿಣಾಮ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಸಾವನಪ್ಪಿ; ಮತ್ತೋರ್ವ ಮಹಿಳೆ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ದೊಡ್ಡಪುಲಿಕೋಟು ಗ್ರಾಮದಲ್ಲಿ ಬೆಳಿಗ್ಗೆ 11.30ರ ಸುಮಾರಿಗೆ ನಡೆದಿದೆ.ದಾಯನ ತಮ್ಮಯ್ಯ (40), ಅನಿಲ್ (45) ಮತ್ತು ಅನಿಲ್ ಪತ್ನಿ ಕವಿತಾ (36) ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, ಗಾಯಗೊಂಡ ಸುನಿತಾ (28) ಎಂಬಾಕೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ವಿವರ: ಬಾಗಮಂಡಲ ಸಮೀಪದ ಚೆಟ್ಟಿಮಾನಿ ಗ್ರಾಮದ ದಾಯನ ತಮ್ಮಯ್ಯ ಮತ್ತು ಪತ್ನಿ ಚೈತ್ರಾ, ಕೇರಳ ರಾಜ್ಯದ ಕಾಸರಗೋಡುವಿನ ಅನಿಲ್ ಮತ್ತು ಕವಿತಾ ದೊಡ್ಡಪುಲಿಕೋಟು ಗ್ರಾಮದ ಮಾದೆಯಂಡ ಕುಞ್ಞಪ್ಪ ಎಂಬವರ ತೋಟದಲ್ಲಿ ಮರ ಕಪಾತು ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಅಲ್ಯುಮಿನಿಯಂ ಏಣಿ ಜಾರಿ ವಿದ್ಯುತ್ ತಂತಿಗೆ ತಗುಲಿದೆ. ಇದರ ಬಗ್ಗೆ ಅರಿವಿಲ್ಲದ ಇವರು ಏಣಿಯನ್ನು ಸರಿಪಡಿಸಲು ಮುಟ್ಟಿದಾಗ ಒಬ್ಬೊಬ್ಬರೇ ಪ್ರಾಣ ಕಳೆದುಕೊಂಡಿದ್ದಾರೆ. ಕೊನೆಯಲ್ಲಿ ಏಣಿ ಮುಟ್ಟಲು ಮುಂದಾದ ದಾಯನ ಸುನಿತಾಳನ್ನು ತೋಟದ ಮಾಳಿಕ ಕುಞ್ಞಪ್ಪ ರಕ್ಷಿಸಿದ್ದಾರೆ. ಘಟನೆಯಲ್ಲಿ ತಮ್ಮಯ ಮತ್ತು ಅನಿಲ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಕವಿತಾ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿರುವದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಇವರು ಕರವಂಡ ಸುರೇಶ ಅವರ ಲೈನ್ ಮನೆಯಲ್ಲಿ ಕೂಲಿ ಕಾರ್ಮಿಕರಾಗಿ ವಾಸವಾಗಿದ್ದು, ಇವರುಗಳನ್ನು ಕೆಲಸಕ್ಕಾಗಿ ಮಾದೆಯಂಡ ಕುಂಞಪ್ಪ ಅವರ ತೋಟಕ್ಕೆ ಕಳುಹಿಸಿಕೊಟ್ಟಿದ್ದರು.

ಮೃತ ದಾಯನ ತಮ್ಮಯ್ಯ ಅವರ ಪತ್ನಿ ಚೈತ್ರಾ ನೀಡಿದ ದೂರಿನಂತೆ ಮೊಕದ್ದಮೆ ದಾಖಲಿಸಿಕೊಂಡಿರುವ ನಾಪೋಕ್ಲು ಪೊಲೀಸರು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

(ಮೊದಲ ಪುಟದಿಂದ) ಈ ದುರ್ಘಟನೆಯಿಂದ ಗ್ರಾಮದಲ್ಲಿ ಆಘಾತಕಾರಿ ಬೆಳವಣಿಗೆಯೊಂದಿಗೆ ಮೃತರ ಬಂಧುವರ್ಗ ಹಾಗೂ ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದ ವಾತಾವರಣ ಗೋಚರಿಸಿತು.

ಮೃತ ತಮ್ಮಯ್ಯ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಅನಿಲ್ ಹಾಗೂ ಕವಿತಾ ದಂಪತಿ ಚಿಕ್ಕವಯಸ್ಸಿನ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಘಟನಾ ಸ್ಥಳದಲ್ಲಿ ಮೃತರ ಬಂಧುಗಳ ಆಕ್ರಂಧನ ಮುಗಿಲು ಮುಟ್ಟಿತ್ತು. ಕೂಲಿ ಆಸೆಗೆ ಬಂದು ಸಾವಿನ ಮನೆಯ ಕದತಟ್ಟಿದ ಕರುಣಾಜನಕ ಘಟನೆ ಇದಾಗಿದೆ. ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ರೇಣುಕಾ ಪ್ರಸಾದ್, ಸಿಬ್ಬಂದಿಗಳಾದ ನವೀನ್, ಹರೀಶ್, ಮಾಚಯ್ಯ, ಸಮ್ಮದ್ ಹಾಗೂ ಚೆಸ್ಕಾಂನ ಕಿರಿಯ ಅಭಿಯಂತರ ಹೆಚ್.ಆರ್. ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ನಾಪೋಕ್ಲು ಠಾಣೆಯಲ್ಲಿ ತೋಟ ಮಾಲೀಕರ ನಿರ್ಲಕ್ಷ್ಯ ಸಂಬಂಧ ಪ್ರಕರಣ ದಾಖಲಾಗಿದೆ.

- ವರದಿ: ದುಗ್ಗಳ ಸದಾನಂದ, ಪ್ರಭಾಕರ್