ಮಡಿಕೇರಿ, ಮೇ 19: ಕೊಡವ ಸಮಾಜಗಳ ಪೈಕಿ ಪ್ರಪ್ರಥಮವಾದ, ವಿಶ್ವದ ಯಾವದೇ ಭಾಗದಲ್ಲಿರುವ ಕೊಡವ ಸಮುದಾಯದವರು ಸದಸ್ಯತ್ವ ಪಡೆದುಕೊಳ್ಳಲು ಅವಕಾಶವಿರುವಂತಹ ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿರುವ ಮಡಿಕೇರಿ ಕೊಡವ ಸಮಾಜದ ನೂತನವಾದ ಕೇಂದ್ರ ಸ್ಥಾಪನೆಯ ಕೆಲಸಕ್ಕೆ ಪ್ರಯತ್ನಗಳು ಆರಂಭಗೊಂಡಿವೆ.ಫೀ.ಮಾ. ಕಾರ್ಯಪ್ಪ ವೃತ್ತ (ಸುದರ್ಶನ) ದಿಂದ ಮುಂದೆ ಮೈಸೂರು ರಸ್ತೆಯ ಒತ್ತಿನಲ್ಲಿ ಸುಮಾರು ಐದೂವರೆ ಎಕರೆ ಸ್ಥಳವನ್ನು ಮಡಿಕೇರಿ ಕೊಡವ ಸಮಾಜ ಹೊಂದಿದ್ದು, ಈ ಪ್ರದೇಶ ಈ ತನಕ ಸೂಕ್ತವಾಗಿ ಬಳಕೆಯಾಗದೆ ಕಾಡಿನಿಂದ ಆವೃತ್ತವಾಗಿತ್ತು. ಮಡಿಕೇರಿ ಸಮಾಜಕ್ಕೆ ಸುಸಜ್ಜಿತವಾದ ಕಟ್ಟಡಬೇಕೆಂಬ ಅಭಿಪ್ರಾಯಗಳು ಒಂದೆಡೆಯಾಗಿದ್ದು, ಪ್ರಸ್ತುತ ಇರುವ ಕಟ್ಟಡ ಕಿಷ್ಕಿಂಧೆಯಾಗಿ ವಾಣಿಜ್ಯ ಕಟ್ಟಡವಾಗಿ ಪರಿವರ್ತನೆ ಗೊಂಡಿರುವ ಹಿನ್ನೆಲೆಯಲ್ಲಿ ಹಿಂದಿನ ಮಹಾಸಭೆಯಲ್ಲಿ ಈಗಿನ ಆಡಳಿತ ಮಂಡಳಿ ಹೊಸ ಆವಿಷ್ಕಾರಕ್ಕೆ ಅನುಮೋದನೆ ಪಡೆದುಕೊಂಡಿತ್ತು. ಆದರೂ ಈ ಜಾಗದ ಒತ್ತಿನಲ್ಲಿ ಕೊಡವ ಸಮಾಜದ ರುದ್ರಭೂಮಿಯೂ ಇದೆ ಎಂಬ ಕಾರಣದಿಂದಾಗಿ ಕೆಲವು ಅಪಸ್ವರಗಳೂ ವ್ಯಕ್ತಗೊಂಡಿತ್ತು. ಪ್ರಸ್ತುತದ ಪರಿಸ್ಥಿತಿಗೆ ಅನುಗುಣವಾಗಿ ಯಾವ ರೀತಿಯಲ್ಲಿ ಇದನ್ನು ಕಾರ್ಯರೂಪಕ್ಕೆ ತರಬಹುದು ಎಂಬ ಚಿಂತನೆಯಿಂದ ಉದ್ದೇಶಿತ ಕಾಮಗಾರಿ ವಿಳಂಬ ಗೊಂಡಿತ್ತಾದರೂ, ಇದೀಗ ಈ ನಿಟ್ಟಿನಲ್ಲಿ ಆಡಳಿತ
(ಮೊದಲ ಪುಟದಿಂದ) ಮಂಡಳಿ ಹಲವು ಪ್ರಯತ್ನಗಳ ಬಳಿಕ ಹೆಜ್ಜೆ ಇರಿಸಿದೆ. ಕೊಡವ ಸಮಾಜ ಹೊಂದಿರುವ ಒಟ್ಟು ಜಾಗ, ಸ್ಮಶಾನಕ್ಕೆ ಸೇರಿದ ಜಾಗ ಈ ಎಲ್ಲವನ್ನೂ ಪರಿಶೀಲಿಸಿ ಇದೀಗ ಜಾಗ ಗುರುತು ಮಾಡುವ ಕೆಲಸ ಸಾಗಿದೆ. ಸಮಾಜದ ಅಧ್ಯಕ್ಷರಾದ ಕೊಂಗಂಡ ಎಸ್. ದೇವಯ್ಯ ಅವರ ಪ್ರಕಾರ ಕೆಲವರು ಸಮಾಜ ಹೊಂದಿರುವ ಈ ಪ್ರದೇಶದ ಸುಮಾರು ಆರು ಎಕರೆ ಜಾಗವನ್ನೂ ರುದ್ರಭೂಮಿಗೆ ಸೇರಿದ ಸ್ಥಳ ಎಂಬಂತೆ ತಪ್ಪು ಮಾಹಿತಿ ಹರಡಿತ್ತು. ಆದರೆ ರುದ್ರಭೂಮಿಗೆ ಸರಕಾರದಿಂದ ಅಧಿಕೃತವಾಗಿರುವದು ಕೇವಲ 61 ಸೆಂಟ್ ಮಾತ್ರವಾಗಿದ್ದು, ಈ ಪ್ರದೇಶವನ್ನು ಯಾವ ರೀತಿಯಲ್ಲೂ ಬಳಕೆ ಮಾಡಲಾಗುವದಿಲ್ಲ. ಬದಲಿಗೆ ಈ ಪ್ರದೇಶವನ್ನು ಅದರಷ್ಟಕ್ಕೆ ಉಳಿಸಿಕೊಂಡು ಇನ್ನಿರುವ ಜಾಗದಲ್ಲಿ ಈ ಪ್ರದೇಶದಿಂದ ದೂರವಾಗಿ ನೂತನ ಕೇಂದ್ರ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. 61 ಸೆಂಟ್ ಜಾಗದಲ್ಲಿರುವ ರುದ್ರಭೂಮಿ ಸ್ಥಳ ಒಂದು ಮೂಲೆಯಲ್ಲಿದೆ. ಇದಕ್ಕೂ ಉಳಿಕೆ ಜಾಗಕ್ಕೂ ಸಂಬಂಧವಿಲ್ಲ ಎನ್ನುವ ಅಭಿಪ್ರಾಯ ಅಧ್ಯಕ್ಷ ದೇವಯ್ಯ ಹಾಗೂ ಆಡಳಿತ ಮಂಡಳಿಯವರದ್ದಾಗಿದೆ.
ಈ ಹಿಂದೆ 1839ರಿಂದ 1890ರ ಅವಧಿಯಲ್ಲಿ ಕೊಡಗಿನ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಕೊಂಗಂಡ ಗಣಪತಿ ಅವರ ಅಧಿಕಾರಾವಧಿಯ ಸಂದರ್ಭದಲ್ಲಿ ಕೊಡವ ಸಮಾಜಕ್ಕೆ ಈ ಜಾಗ ದೊರೆತಿದೆ ಎಂಬ ಅಂದಾಜಿದೆ. ಇದೇ ಗಣಪತಿ ಅವರ ಹೆಸರಿನಲ್ಲಿಯೇ ಮಡಿಕೇರಿಯ ಹೃದಯಭಾಗದಲ್ಲಿರುವ ಗಣಪತಿ ಬೀದಿ ಇರುವದೂ ಇಲ್ಲಿ ಉಲ್ಲೇಖನೀಯವಾಗಿದೆ.
ಮೈಸೂರು ಮುಖ್ಯರಸ್ತೆಯ ಬದಿಯಲ್ಲೇ ವಿಶಾಲ ಜಾಗ ಹೊಂದಿದ್ದರೂ ಇದನ್ನು ಇಲ್ಲಿಯವರೆಗೆ ಸೂಕ್ತವಾಗಿ ಬಳಸಲಾಗಿರಲಿಲ್ಲ. ಈ ಪ್ರದೇಶ ಕಾಡು, ಕಲ್ಲು ಮಣ್ಣಿನಿಂದ ಆವೃತ್ತವಾಗಿತ್ತಲ್ಲದೆ ಜಾಗ ಒತ್ತುವರಿ ಸೇರಿದಂತೆ ಕಸವನ್ನು ತಂದು ಸುರಿಯುವ ಕೆಲಸವೂ ಇಲ್ಲಿ ಕಂಡುಬರುತ್ತಿತ್ತು.
ಸಮತಟ್ಟುಗೊಂಡಿರುವ ಪ್ರದೇಶ
ಪ್ರಸ್ತುತ ಈ ಜಾಗವನ್ನು ಸರಿಯಾಗಿ ಗುರುತಿಸುವದರೊಂದಿಗೆ ಜಾಗವನ್ನು ಸಮತಟ್ಟುಗೊಳಿಸಲಾಗಿದೆ. ಸುಮಾರು ಎರಡೂವರೆ ಎಕರೆಯಷ್ಟು ಜಾಗ ಸಮತಟ್ಟುಗೊಂಡಿದ್ದು, ಇದು ವಿಶಾಲವಾದ ಮೈದಾನದ ರೀತಿಯಲ್ಲಿ ಕಂಡುಬರುತ್ತಿದೆ.
ಇಲ್ಲಿ ಉದ್ದೇಶಿತ ಯೋಜನೆಯನ್ನು ಕಾರ್ಯಗತಗೊಳಿಸಲು ಸರಕಾರದೊಂದಿಗೆ ವ್ಯವಹರಿಸಲಾಗುತ್ತಿದೆ. ಅನುಮತಿಗೆ ಹಾಗೂ ಸರಕಾರ ಮತ್ತು ದಾನಿಗಳಿಂದ ನೆರವು ಸಿಗುವ ಆಶಾಭಾವನೆ ಹೊಂದಿರುವದಾಗಿ ಕೆ.ಎಸ್. ದೇವಯ್ಯ ಅವರು ತಿಳಿಸಿದರು.
ಯೋಜನೆ ಏನು?
ಈ ಜಾಗದಲ್ಲಿ ಸುಸಜ್ಜಿತವಾದ ಸಮುದಾಯಭವನ ನಿರ್ಮಾಣದೊಂದಿಗೆ ಕೊಡವ ಸಾಂಸ್ಕøತಿಕ ಕೇಂದ್ರವಾಗಿಯೂ ಇದನ್ನು ರೂಪುಗೊಳಿಸುವ ಉದ್ದೇಶ ಹೊಂದಲಾಗಿದೆ. ಕೊಡವ ಸಂಸ್ಕøತಿಗೆ ಪೂರಕವಾದ ಐನ್‍ಮನೆ - ಕೈಮಡದ ಸ್ವರೂಪದೊಂದಿಗೆ ಕೊಡವ ಸಂಸ್ಕøತಿಯ ಅಧ್ಯಯನಕ್ಕೂ ಅನುಕೂಲವಾಗುವಂತೆ ಇದನ್ನು ಕಾರ್ಯಗತಗೊಳಿಸುವ ಚಿಂತನೆಯನ್ನು ಹೊಂದಲಾಗಿದೆ ಎಂದು ಆಡಳಿತ ಮಂಡಳಿಯ ಪ್ರಮುಖರು ಹೇಳುತ್ತಾರೆ.
ಇಲ್ಲಿ ಸಮುದಾಯ ಭವನ ನಿರ್ಮಾಣಗೊಂಡರೆ ವಾಹನ ನಿಲುಗಡೆಗೂ ಸಾಕಷ್ಟು ಸ್ಥಳಾವಕಾಶ ಲಭ್ಯವಾಗಲಿದೆ. ಇದರೊಂದಿಗೆ ಕೊಡವ ಸಮಾಜದ ಅಧೀನದಲ್ಲಿ ನಡೆಯುತ್ತಿರುವ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಗೆ ಆಟದ ಮೈದಾನವಿಲ್ಲದಿರುವದರಿಂದ ಲಭ್ಯವಿರುವ ಜಾಗದಲ್ಲಿ ಮೈದಾನ ನಿರ್ಮಿಸುವ ತೀರ್ಮಾನವನ್ನು ಈ ಹಿಂದೆ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಕೈಗೊಳ್ಳಲಾಗಿತ್ತು.