ಮಡಿಕೇರಿ, ಮೇ 20: ಕೊಡಗಿನ ಹಲವೆಡೆಗಳಲ್ಲಿ ಕಾಫಿ ತೋಟಗಳ ನಡುವೆ ಕಾರ್ಮಿಕರಾಗಿರುವ ಬುಡಕಟ್ಟು ಜನಾಂಗದವರಿಗೆ, ಜಿಲ್ಲಾಡಳಿತ ಸ್ವಂತ ನಿವೇಶನದೊಂದಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಬುಡಕಟ್ಟು ಕಾರ್ಮಿಕರ ಸಂಘ ಬೇಡಿಕೆ ಸಲ್ಲಿಸಿದೆ.ಇಂದು ಜಿಲ್ಲಾಧಿಕಾರಿ ಬಳಿ ಕಾರ್ಮಿಕ ಪ್ರಮುಖರ ನಿಯೋಗ ತೆರಳಿ, ನೂರಾರು ಸಂಖ್ಯೆಯಲ್ಲಿ ಕಾಫಿ ತೋಟಗಳಿಂದ ಹೊರಬಂದಿರುವ ಕಾರ್ಮಿಕರಿಗೆ ಕೆದಮುಳ್ಳೂರು ಹಾಗೂ ಇತರೆಡೆ ಖಾಯಂ ವಸತಿ ಕಲ್ಪಿಸಲು ಮನವಿ ಸಲ್ಲಿಸಿದರು.ಈ ಬಗ್ಗೆ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಅನೀಶ್ ಜಾಯ್ ಕಣ್ಮಣಿ ಅವರು, ನೂರಾರು ಕುಟುಂಬಗಳಿಗೆ ಒಂದೆಡೆ ನಿವೇಶನ ಕಲ್ಪಿಸುವದು ಕಷ್ಟಸಾಧ್ಯವೆಂದು ತಿಳಿಹೇಳಿದರು. ಬದಲಾಗಿ ಕಾರ್ಮಿಕರು ವಾಸವಿರುವ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಬಂಧಪಟ್ಟವರಿಗೆ ಹಂತ ಹಂತವಾಗಿ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು. ಸಂಘದ ಪ್ರಮುಖರಾದ ಸೀತೆ, ಗಪ್ಪು, ಕಮಲ, ಸುಶೀಲ ಮೊದಲಾದವರು ಹಾಜರಿದ್ದರು.