ಸೋಮವಾರಪೇಟೆ, ಮೇ 19: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಸಮೀಪದ ತಲ್ತರೆಶೆಟ್ಟಳ್ಳಿ ಗ್ರಾಮದ ಹಳೆಊರು ಗ್ರೂಪ್ನ ಮಂದಿಗೆ ಪಂಚಾಯಿತಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಈ ಗ್ರೂಪ್ನಲ್ಲಿ ಏಳೆಂಟು ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಬಗ್ಗೆ ವರದಿಯಾದ ಬೆನ್ನಲ್ಲೇ ಪಂಚಾಯಿತಿ ಅಡಳಿತ ಇತ್ತ ಗಮನಹರಿಸಿದ್ದು, ಅಲ್ಲಿನ ನಿವಾಸಿಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮವಹಿಸಲಾಗಿದೆ.
ನೀರು ಲಭ್ಯವಿರುವ ಬೋರ್ಬೆಲ್ಗಳಿಂದ ನೀರು ಸಂಗ್ರಹಿಸಿ ಡ್ರಮ್ಗಳ ಮೂಲಕ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸುವ ಕಾರ್ಯ ನಡೆಯುತ್ತಿದ್ದು, ಎರಡು ದಿನಗಳಿಗೊಮ್ಮೆ ಅಗತ್ಯವಿರುವಷ್ಟು ನೀರನ್ನು ಒದಗಿಸಲಾಗುವದು ಎಂದು ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ತಿಳಿಸಿದ್ದಾರೆ.
ಪಿಕ್ಅಪ್ ವಾಹನದ ಮೂಲಕ ಹಳೆಊರು ಗ್ರೂಪ್ನಲ್ಲಿರುವ ಗ್ರಾಮಸ್ಥರಿಗೆ ಸದ್ಯ ನೀರನ್ನು ಒದಗಿಸಲಾಗುತ್ತಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಬೋರ್ವೆಲ್ ಕೊರೆಸಬೇಕಾದ ಅಗತ್ಯವಿದ್ದು, ಈ ಬಗ್ಗೆ ಈಗಾಗಲೇ ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಬೋರ್ವೆಲ್ ಪಾಯಿಂಟ್ ಮಾಡಲಾಗಿದ್ದು, ಅನುಮೋದನೆ ದೊರೆತ ತಕ್ಷಣ ಬೋರ್ವೆಲ್ ಕೊರೆಸಲಾಗುವದು. ಸದ್ಯದ ಮಟ್ಟಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಬಗ್ಗನ ಅನಿಲ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಕುಂದಳ್ಳಿಯಲ್ಲಿ ನೈಸರ್ಗಿಕ ನೀರು: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಕುಂದಳ್ಳಿ ಗ್ರಾಮದ ಕೆಲವರು ನೈಸರ್ಗಿಕ ನೀರಿನ ಮೊರೆ ಹೋಗಿದ್ದಾರೆ. ಬೋರ್ವೆಲ್, ತೆರೆದ ಬಾವಿಗಳಲ್ಲಿ ನೀರು ಬತ್ತಿರುವ ಹಿನ್ನೆಲೆ ಬೆಟ್ಟದ ತಟದಿಂದ ಹರಿಯುವ ಸಣ್ಣಪುಟ್ಟ ತೋಡಿಗೆ ಪೈಪ್ ಅಳವಡಿಸಿ ನೀರನ್ನು ಸಂಗ್ರಹಿಸುತ್ತಿದ್ದಾರೆ.
ಪಶ್ಚಿಮಘಟ್ಟ ಪ್ರದೇಶದ ಪುಷ್ಪಗಿರಿ ಸೇರಿದಂತೆ ಇನ್ನಿತರ ಬೆಟ್ಟಶ್ರೇಣಿಗೆ ಹೊಂದಿಕೊಂಡಂತೆ ಇರುವ, ನಿತ್ಯ ಹಚ್ಚಹಸಿರಿನಿಂದ ಕೂಡಿರುವ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲೇ ಈ ಬಾರಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿರುವದು ವಿಪರ್ಯಾಸ. ತಾಲೂಕಿನ ಮಟ್ಟಿಗೆ ವಾರ್ಷಿಕ ಅತೀ ಹೆಚ್ಚು ಮಳೆಯಾಗುವ ಈ ಭಾಗದಲ್ಲಿ, ಮಾರ್ಚ್,ಏಪ್ರಿಲ್ನಿಂದಲೇ ಬಾವಿಗಳು ಬತ್ತಿ ಕುಡಿಯುವ ನೀರಿಗೆ ಸಂಚಕಾರ ಉಂಟಾಗಿದ್ದು ಆಶ್ಚರ್ಯವಾದರೂ ಸತ್ಯ.