ಸಿದ್ದಾಪುರ, ಮೇ 20: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಇಬ್ಬರು ಯುವಕರಿಗೆ ಗ್ರಾಮಸ್ಥರು ಗೂಸಾ ನೀಡಿರುವ ಘಟನೆ ಕೊಂಡಂಗೇರಿಯಲ್ಲಿ ನಡೆದಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿದ್ದಾಪುರ, ನೆಲ್ಯಹುದಿಕೇರಿ, ಕೊಂಡಂಗೇರಿ ವ್ಯಾಪ್ತಿಯಲ್ಲಿ ಗಾಂಜಾ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ವ್ಯಾಪ್ತಿಯ ಅಪ್ರಾಪ್ತ ಬಾಲಕರು ಗಾಂಜಾ ವ್ಯಸನಿಗಳಾಗುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಲವಾರು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ, ಕೂಡ ಗಾಂಜಾ ದಂಧೆಯನ್ನು ಮಟ್ಟ ಹಾಕಲು ಪೊಲೀಸರಿಂದ ಸಾಧ್ಯವಾಗಿಲ್ಲ. ಈ ಪ್ರಕರಣವು ಗ್ರಾಮ ಸಭೆಗಳಲ್ಲೂ ಪ್ರತಿಧ್ವನಿಸಿದ್ದರೂ ಪ್ರಕರಣಕ್ಕೆ ಮುಕ್ತಿ ಮರೀಚಿಕೆಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.