ಶನಿವಾರಸಂತೆ, ಮೇ 20: ಕೊಡ್ಲಿಪೇಟೆ ಹೋಬಳಿ ಬೆಸೂರು ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದಲ್ಲಿ ಕುಡಿದು ಮನೆಗೆ ಬಂದು ಪತ್ನಿ, ಮಕ್ಕಳ ಮೇಲೆ ಹಲ್ಲೆ ಮಾಡಿದ ಬಗ್ಗೆ ಪತಿ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಟ್ಟೆಪುರದ ನಿವಾಸಿ ಕೂಲಿಕಾರ್ಮಿಕ ಧರ್ಮ ಶನಿವಾರ ರಾತ್ರಿ ಕುಡಿದು ಮನೆಗೆ ಬಂದು ಪತ್ನಿ ಪಾರ್ವತಿಯೊಂದಿಗೆ ಜಗಳ ಮಾಡುತ್ತಿದ್ದಾಗ ಅವರ ಮಗಳು ಪ್ರಶ್ನಿಸಿದ್ದಕ್ಕೆ ಸ್ಥಳದಲ್ಲಿದ್ದ ಕತ್ತಿಯಿಂದ ಎಡಕೈಗೆ ಕಡಿದು ಗಾಯಗೊಳಿಸಿರುತ್ತಾನೆ. ಜಗಳ ಬಿಡಿಸಲು ಬಂದ ಮಗನಿಗೂ ಕಚ್ಚಿ ಗಾಯಪಡಿಸಿರುತ್ತಾನೆ. ಈ ಬಗ್ಗೆ ಪತ್ನಿ ಪಾರ್ವತಿ ಭಾನುವಾರ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.