ಬಸ್ ಪಾಸ್ ದರ ಶೇ. 15 ರಷ್ಟು ಹೆಚ್ಚಳ
ಬೆಂಗಳೂರು, ಮೇ 19: ಪ್ರಸಕ್ತ ಸಾಲಿನ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಿಎಂಟಿಸಿ ಶಾಕ್ ನೀಡಿದೆ. ಬಿಎಂಟಿಸಿ ರಿಯಾಯಿತಿ ದರದ ಬಸ್ ಪಾಸಿನ ಅಭಿವೃದ್ಧಿ ಶುಲ್ಕದಲ್ಲಿ ಶೇ. 15 ರಷ್ಟು ಹೆಚ್ಚಳ ಮಾಡಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಮಾರ್ಟ್ ಕಾರ್ಡ್ ಆಧಾರಿತ ಬಸ್ ಪಾಸನ್ನು ಜುಲೈ ಮೊದಲ ವಾರದಿಂದ ವಿತರಿಸಲಾಗುತ್ತಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಅಭಿವೃದ್ಧಿ ಶುಲ್ಕ ರೂಪದಲ್ಲಿ ರೂ. 200 ಪಾವತಿಸಬೇಕಾಗಿದೆ. ಕಳೆದ ವರ್ಷ ಅಭಿವೃದ್ಧಿ ಶುಲ್ಕ 170 ರೂ ಇದ್ದಿತ್ತು. ಈ ಸಾಲಿನಲ್ಲಿ ಬಸ್ ಪಾಸ್ ಪಡೆಯಲು ತಲಾ 30 ರೂಪಾಯಿ ಅಭಿವೃದ್ಧಿ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 600, ವಿದ್ಯಾರ್ಥಿನಿಯರಿಗೆ 400, ಪಿಯುಸಿ ವಿದ್ಯಾರ್ಥಿಗಳಿಗೆ 900, ಪದವಿ ಕಾಲೇಜು ವಿದ್ಯಾರ್ಥಿಗಳಿಗೆ 1100, ವೃತ್ತಿಪರ ಕಾಲೇಜು ವಿದ್ಯಾರ್ಥಿಗಳಿಗೆ 1150, ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ 1680, ಸಂಜೆ ಕಾಲೇಜು ಅಥವಾ ಪಿಎಚ್ಡಿ ಸಂಶೋಧಕ ವಿದ್ಯಾರ್ಥಿಗಳಿಗೆ 1480 ರೂ. ಶುಲ್ಕವನ್ನು ನಿಗದಿಗೊಳಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿರುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಆದರೆ ಆ ವಿದ್ಯಾರ್ಥಿಗಳು ಕೂಡಾ ರೂ. 200 ಅಭಿವೃದ್ಧಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು.