ಸಿದ್ದಾಪುರ, ಮೇ 19: ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಯುವಕ ಜೇನುಸಾಕಾಣಿಕೆಯ ಬಗ್ಗೆ ಮಾದ್ಯಮಗಳಲ್ಲಿ ಪ್ರಸಾರವಾದ ಕಾರ್ಯಕ್ರಮದಿಂದ ಆಕರ್ಷಿತಗೊಂಡು ಜೇನು ಸಾಕಾಣಿಕೆ ಆರಂಭಿಸಿ, ಯಶಸ್ಸನ್ನು ಕಾಣುತ್ತಿದ್ದಾನೆ.
ಗುಹ್ಯ ಗ್ರಾಮದ ಕೂಡುಗದ್ದೆ ನಿವಾಸಿ ರಶೀದ್ ಚಿಕ್ಕಂದಿನಿಂದಲೇ ಜೇನು ನೊಣಗಳ ಬಗ್ಗೆ ಆಸಕ್ತಿ ಹೊಂದಿದ್ದನು. ಕೆಲವು ವರ್ಷಗಳ ಹಿಂದೆ ಆಕಾಶವಾಣಿಯಲ್ಲಿ ಜೇನು ಸಾಕಾಣೆಯ ಬಗ್ಗೆ ಕಾರ್ಯಕ್ರಮವೊಂದು ಪ್ರಕಟಗೊಂಡ ಸಂದರ್ಭ ಅದನ್ನು ಆಲಿಸಿ, ತನಗೂ ಜೇನು ಸಾಕಾಣೆ ಮಾಡಬೇಕೆಂಬ ಬಯಕೆ ಈತನಲ್ಲಿ ಮೂಡಿತ್ತು. ಕೂಡುಗದ್ದೆಯ ತನ್ನ ನಿವಾಸದ 10 ಸೆಂಟು ಜಾಗದಲ್ಲಿ ಜೇನು ಸಾಕಾಣೆ ಮಾಡಲು ಹೊರಟ ರಶೀದ್ಗೆ ಜೇನು ನೊಣಗಳನ್ನು ಹಿಡಿಯುವದು ಕೂಡ ಗೊತ್ತಿರಲಿಲ್ಲ. ಈ ಸಂದರ್ಭ ಯೂಟ್ಯೂಬ್ನಲ್ಲಿ ಜೇನು ನೊಣಗಳನ್ನು ಹಿಡಿಯುವ ಬಗೆಗಿನ ವಿಡಿಯೋಗಳನ್ನು ನೋಡಿ ಕಲಿಯುತ್ತಾನೆ. ಎರಡು ವರ್ಷಗಳ ಹಿಂದೆ ತನ್ನ ಮನೆಯ ಸಮೀಪದ ನದಿಯ ಬಳಿಯಲ್ಲಿ ಹುತ್ತದಲ್ಲಿ ಜೇನು ನೊಣಗಳಿದೆ ಎಂದು ಕೆಲ ಯುವಕರು ರಶೀದ್ಗೆ ತಿಳಿಸಿದ ಮೇರೆಗೆ ರಶೀದ್ ಮೊದಲ ಪ್ರಯತ್ನ ಮಾಡುತ್ತಾನೆ. ನೊಣಗಳಿಗೆ ಬೇಕಾದ ಪೆಟ್ಟಿಗೆಯೊಂದನ್ನು ತಯಾರಿಸಿ, ಹುತ್ತವನ್ನು ಭೇದಿಸಿ, ಜೇನುಗಳನ್ನು ಸಂಗ್ರಹಿಸತೊಡಗಿದ. ಆರಂಭದಲ್ಲಿ ಜೇನುನೊಣಗಳು ಕಚ್ಚುತ್ತಿತ್ತು. ಬಳಿಕ ಜೇನು ನೊಣಗಳನ್ನು ನೋಯಿಸದೆ ಜೇನನ್ನು ತೆಗೆಯುವದು ಹಾಗೂ ಜೇನು ನೊಣಗಳನ್ನು ಹಿಡಿಯಲಾರಂಭಿಸಿದ.
ಯಾರದೇ ಸಹಾಯವಿಲ್ಲದೇ ತನ್ನ ಸ್ವಂತ ಪರಿಶ್ರಮದಿಂದ ಜೇನು ಸಾಕಾಣಿಕೆ ಆರಂಭಿಸಿದ ರಶೀದ್ ಇದೀಗ ಮನೆಯಲ್ಲಿ 5 ಜೇನು ಪೆಟ್ಟಿಗೆಗಳನ್ನು ಹೊಂದಿದ್ದಾನೆ. ಎಂದಿನಂತೆ ಕೂಲಿ ಕೆಲಸ ಮಾಡುತ್ತಿರುವ ರಶೀದ್ ಉಳಿದ ಸಮಯದಲ್ಲಿ ಜೇನು ನೊಣಗಳ ಆರೈಕೆ ಮಾಡುತ್ತಿದ್ದಾನೆ. ಈಗಾಗಲೇ ಹಲವು ಬಾರಿ ಜೇನನ್ನು ತೆಗೆಯಲಾಗಿದ್ದು, ಕಲಬೆರಕೆ ರಹಿತ, ಗುಣಮಟ್ಟದ ಜೇನನ್ನು ತನ್ನ ಮಕ್ಕಳಿಗೆ, ನೆರೆಕರೆಯವರಿಗೆ ನೀಡಿದ್ದಾನೆ. ತನಗೆ ಬೇಕಾದ ಜೇನು ನೊಣಗಳನ್ನು ಸ್ವತಃ ರಶೀದ್ ಹಿಡಿದು ತರುತ್ತಾನೆ. ಇದೀಗ ರಶೀದ್ ಮನೆಯಲ್ಲಿ ‘ಹುತ್ತ ಜೇನು ನೊಣ’ಗಳು ಇದ್ದು, ನೊಣಗಳಿಗೆ ಬೇಕಾದ ರೀತಿಯಲ್ಲಿ ಗೂಡನ್ನು ನಿರ್ಮಿಸಲಾಗಿದೆ.
ಮರದ ಹಲಗೆಗಳಿಂದ ಜೇನು ಗೂಡನ್ನು ಮಾಡಲಾಗಿದ್ದು, ಪ್ರತಿ ಪೆಟ್ಟಿಗೆಗೂ ಸರಿಸುಮಾರು 2500 ರೂ ವೆಚ್ಚವಾಗುತ್ತಿದೆ. ಇಲಾಖೆಯ ಬೆಂಬಲ ದೊರೆತರೆ ಮುಂದಿನ ವರ್ಷ 30 ಪೆಟ್ಟಿಗೆಗಳನ್ನು ಮಾಡುವ ಗುರಿಯನ್ನು ರಶೀದ್ ಹೊಂದಿದ್ದಾನೆ. ಯುವ ಪ್ರಗತಿಪರ ಕೃಷಿಕ ರಶೀದ್ಗೆ ಸಂಬಂಧಪಟ್ಟ ಇಲಾಖೆ ಬೆಂಬಲ ನೀಡಿ, ಮತ್ತಷ್ಟು ಸಾಧನೆಗೆ ಅವಕಾಶ ಕಲ್ಪಿಸಿಕೊಡಬೇಕಾಗಿದೆ.
- ಎ.ಎನ್. ವಾಸು