ಸೋಮವಾರಪೇಟೆ, ಮೇ 18: ಇಲ್ಲಿನ ರೇಂಜರ್ ಬ್ಲಾಕ್‍ನಲ್ಲಿ ಶ್ರೀವನದುರ್ಗಿ ದೇವಾಲಯವನ್ನು ಒಳಗೊಂಡಂತೆ ಇರುವ ಜಾಗದ ಸರ್ವೆ ಕಾರ್ಯ ತಾ.28ರಂದು ನಡೆಯಲಿದ್ದು, ಹನಫಿ ಜಾಮಿಯಾ ಮಸೀದಿ, ವನದುರ್ಗಿ ದೇವಾಲಯ ಸಮಿತಿ ಸೇರಿದಂತೆ ಸ್ಥಳೀಯ ನಿವಾಸಿಗಳಿಗೆ ಸರ್ವೆ ಇಲಾಖೆಯಿಂದ ನೋಟೀಸ್ ಜಾರಿ ಮಾಡಲಾಗಿದೆ.

ಕಳೆದ ಕೆಲ ದಶಕಗಳ ಹಿಂದೆ ರೇಂಜರ್ ಬ್ಲಾಕ್‍ನ ಸರ್ವೆ ನಂ.46/1, 46/2, 47,48 ಮತ್ತು 49ರ ಜಾಗವನ್ನು ಹನಫಿ ಜಾಮಿಯಾ ಮಸೀದಿಗೆ ಕೆಲವರು ದಾನವಾಗಿ ನೀಡಿದ್ದು, ಇದೇ ಜಾಗದೊಳಗೆ ಶ್ರೀವನದುರ್ಗಿ, ಗುಳಿಗ ದೇವಾಲಯವೂ ಇದೆ. ದೇವಾಲಯದಲ್ಲಿ ವಾರ್ಷಿಕ ಪೂಜೋತ್ಸವಗಳು ನಡೆದುಕೊಂಡು ಬಂದಿದ್ದು, ಪ್ರಸಕ್ತ ವರ್ಷದ ಪೂಜೋತ್ಸಕ್ಕೆ ಆರಂಭದಲ್ಲಿ ಕೆಲ ಅಡೆತಡೆಗಳು ಎದುರಾಗಿತ್ತು.

ಜಾಮೀಯ ಮಸೀದಿಗೆ ದಾನವಾಗಿ ನೀಡಲ್ಪಟ್ಟ ಜಾಗದ ಮೂಲಕವೇ ದೇವಾಲಯಕ್ಕೆ ಪ್ರವೇಶವಿದ್ದು, ಯಾವದೇ ಕಾರಣಕ್ಕೂ ಇಲ್ಲಿ ಸ್ಥಳಾವಕಾಶ ನೀಡುವದಿಲ್ಲ ಎಂದು ಕೆಲವರು ಹೇಳಿದ್ದರಿಂದ ಪರಿಸ್ಥಿತಿ ಬೂದಿಮುಚ್ಚಿದ ಕೆಂಡವಾಗಿತ್ತು. ನಂತರ ಪೊಲೀಸರ ಮಧ್ಯಸ್ಥಿಕೆ, ಮೀಸಲು ಪಡೆಯ ನಿಯೋಜನೆಯಿಂದ ಪರಿಸ್ಥಿತಿ ಶಾಂತಗೊಂಡು ಪೂಜೋತ್ಸವ ಮುಕ್ತಾಯವಾಗಿತ್ತು.

ಈ ಸಮಯದಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್‍ಪಿ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು, ಸರ್ವೆ ಇಲಾಖಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದ್ದರು. ಪೂಜೋತ್ಸವದ ನಂತರ ತಾ. 3.5.2019ರಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಹನಫಿ ಜಾಮಿಯಾ ಮಸೀದಿ, ವನದುರ್ಗಿ ದೇವಾಲಯ ಸಮಿತಿ, ವಕ್ಫ್ ಬೋರ್ಡ್‍ನ ಪದಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಗಿತ್ತು. ಅಂದಿನ ಸಭೆಯಲ್ಲಿ ಜಾಗದ ಹದ್ದುಬಸ್ತಿಗಾಗಿ ಸರ್ವೆ ಕಾರ್ಯ ನಡೆಸುವ ಬಗ್ಗೆ ಚರ್ಚೆಯಾಗಿತ್ತು. ಅದರಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆ ತಾ. 28ರಂದು ಸರ್ವೆ ಕಾರ್ಯ ನಡೆಸಲು ನಿರ್ಧರಿಸಿದ್ದು, ಹನಫಿ ಜಾಮಿಯಾ ಮಸೀದಿ, ದೇವಾಲಯ ಸಮಿತಿ, ವಿರಕ್ತ ಮಠಾಧೀಶರಾದ ವಿಶ್ವೇಶ್ವರ ಸ್ವಾಮೀಜಿ ಸಹಿತ ಜಾಗದ ಸುತ್ತಮುತ್ತಲಿನ ನಿವಾಸಿಗಳಿಗೆ ನೋಟೀಸ್ ಜಾರಿ ಮಾಡಿದ್ದು, ಸರ್ವೆ ಕಾರ್ಯ ಸಂದರ್ಭ ಹಾಜರಿರುವಂತೆ ಸೂಚಿಸಲಾಗಿದೆ. ಇದರೊಂದಿಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಪೊಲೀಸ್ ವೃತ್ತ ನಿರೀಕ್ಷಕರಿಗೂ ಸೂಚನೆ ನೀಡಲಾಗಿದೆ.