ಸೋಮವಾರಪೇಟೆ, ಮೇ18: ಕಾಂಕ್ರೀಟ್ ಯಂತ್ರ ಸಹಿತ ಕಾರ್ಮಿಕರನ್ನು ಸಾಗಾಟಗೊಳಿಸುತ್ತಿದ್ದ ಐಷರ್ ವಾಹನವೊಂದು ಬ್ರೇಕ್ ವಿಫಲಗೊಂಡು ಪಲ್ಟಿಯಾದ ಪರಿಣಾಮ, ವಾಹನದೊಳಗಿದ್ದ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸಮೀಪದ ಹೊಸಬೀಡು ಗ್ರಾಮದಲ್ಲಿ ಇಂದು ಸಂಭವಿಸಿದೆ.
ಮೂಲತಃ ಮಂಡ್ಯದವರಾದ ಕಳೆದ 30 ವರ್ಷಗಳಿಂದ ಕೂಡಿಗೆಯಲ್ಲಿ ನೆಲೆಸಿದ್ದ ಮಹದೇವ್ (48) ಎಂಬವರೇ ಮೃತಪಟ್ಟವರು. ಹೊಸಬೀಡು ಗ್ರಾಮದ ಯಶ್ವಂತ್ ಅವರಿಗೆ ಸೇರಿದ ತೋಟದಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿರುವ ಹೋಂ ಸ್ಟೇ ಕಾಮಗಾರಿಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಹೊಸಬೀಡು ಗ್ರಾಮದಲ್ಲಿರುವ ತೋಟದೊಳಗೆ ಹೋಂ ಸ್ಟೇ ಕಾಮಗಾರಿ ನಡೆಯುತ್ತಿದ್ದು, ಕೂಡಿಗೆಯ ರಘು ಎಂಬವರಿಗೆ ಕಾಂಕ್ರೀಟ್ ಗುತ್ತಿಗೆ ನೀಡಲಾಗಿತ್ತು. ಅದರಂತೆ ಇಂದು ಬೆಳಿಗ್ಗೆ ಐಷರ್ ವಾಹನದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಮಾಡುವ ಯಂತ್ರ ಸಹಿತ 10ಕ್ಕೂ ಅಧಿಕ ಕಾರ್ಮಿಕರನ್ನು ಸಾಗಾಟಗೊಳಿಸಲಾಗುತ್ತಿತ್ತು.
ಈ ಸಂದರ್ಭ ಇಳಿಜಾರು ಪ್ರದೇಶದಲ್ಲಿ ವಾಹನದ ಬ್ರೇಕ್ ವಿಫಲಗೊಂಡು ಕಲ್ಲು ಬಂಡೆಗೆ ಡಿಕ್ಕಿಯಾಗಿ ರಸ್ತೆಯ ಬದಿಗೆ ಉರುಳಿ ಬಿದ್ದಿದೆ. ಈ ಸಂದರ್ಭ ವಾಹನದ ಒಳಗಿದ್ದ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಮಹದೇವ್ ಅವರ ಮೇಲೆ ಬಿದ್ದಿದ್ದು, ತೀವ್ರ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಾಹನದ ಚಾಲಕ ರಮೇಶ್, ವಾಹನದೊಳಗಿದ್ದ ಇತರ ಕಾರ್ಮಿಕರಾದ ನಾಗರಾಜ್, ಮಹೇಶ್ ಅವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮೃತ ಮಹದೇವ್ ಅವರು ಪತ್ನಿ ಸರಸ್ವತಿ ಸೇರಿದಂತೆ ಪುತ್ರಿಯನ್ನು ಅಗಲಿದ್ದು, ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಠಾಣಾಧಿಕಾರಿ ಮೋಹನ್‍ರಾಜ್ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.