ಗೋಣಿಕೊಪ್ಪಲು, ಮೇ 18 : ತೋಟದಲ್ಲಿ ವ್ಯಾಘ್ರನ ಸಂಚಾರ ದೃಢಪಟ್ಟಿದ್ದು ಹೆಜ್ಜೆ ಗುರುತುಗಳು ಸಾಕ್ಷಿ ನೀಡುತ್ತಿವೆ. ಇದರಿಂದ ಅರಣ್ಯ ಸಿಬ್ಬಂದಿಗಳು ತೋಟದ ವಿವಿಧ ಭಾಗದಲ್ಲಿ ಹುಲಿ ಸಂಚಾರವನ್ನು ಕಂಡು ಹಿಡಿಯಲು 5ಕ್ಕೂ ಹೆಚ್ಚು ಕ್ಯಾಮರಾಗಳನ್ನು ಅಳವಡಿಸಿದ್ದಾರೆ.
ತಿತಿಮತಿ ಪಂಚಾಯ್ತಿ ವ್ಯಾಪ್ತಿಯ ಮರಪಾಲ ಸಮೀಪದ ನರವತ್ತು ಎಸ್ಟೇಟ್ನಲ್ಲಿ ವಾರದ ಹಿಂದಿನಿಂದಲೂ ಹುಲಿ ಬೀಡು ಬಿಟ್ಟಿರುವದರಿಂದ ಹಗಲು ರಾತ್ರಿ ಎನ್ನದೆ ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಹುಲಿ ಸಂಚಾರದ ಬಗ್ಗೆ ಹೆಜ್ಜೆ ಗುರುತುಗಳ ಸಹಾಯ ಪಡೆದು ಹುಲಿ ಬೋನನ್ನು ಸಿಬ್ಬಂದಿಗಳು ಸ್ಥಳಾಂತರ ಮಾಡಿದ್ದಾರೆ. ಭಯದ ವಾತಾವರಣದಲ್ಲಿಯೇ ತೋಟದ 50 ಕ್ಕೂ ಅಧಿಕ ಕಾರ್ಮಿಕರು ಕೆಲಸ ನಿರ್ವಹಿಸುವ ಅನಿವಾರ್ಯತೆ ಬಂದೊದಗಿದೆ.
ಅಕ್ಕಪಕ್ಕದಲ್ಲಿ ಇರುವ ತೋಟದ ಮಾಲೀಕರ ಕೊಟ್ಟಿಗೆಗಳಲ್ಲಿ ದನ, ಕರುಗಳ ಮೇಲೆ ಹೆಚ್ಚಿನ ನಿಗಾ ವಹಿಸಿರುವ ಮಾಲೀಕರು ರಾತ್ರಿಯ ವೇಳೆಯಲ್ಲಿ ಹುಲಿ ದಾಳಿ ಇಡಬಹುದೆಂಬ ಭಯದಿಂದ ಕಾರ್ಮಿಕರು ನಿದ್ರೆ ಮಾಡದೆ ಕಾವಲು ಕಾಯುತ್ತಿದ್ದಾರೆ. ಇತ್ತ ಕಾರ್ಮಿಕರಿಗೆ ಕಾಮಧೇನಾಗಿದ್ದ ಕರ್ಪಿ ಎಂಬ ಹಸುವು ಚೇತರಿಸಿಕೊಳ್ಳುತ್ತಿದ್ದು ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಮಾಲೀಕ ರವಿ ಪ್ರತಿ ನಿತ್ಯ ಬಾಳೆ, ಸೇಬು, ಹಲಸಿನ ಹಣ್ಣು, ಹಂಪಲುಗಳನ್ನು ನೀಡುವ ಮೂಲಕ ಹಾರೈಕೆ ಮಾಡುತ್ತಿದ್ದಾರೆ.
ಪ್ರತಿ ದಿನ ಪಶು ವೈದ್ಯರು ಭೇಟಿ ನೀಡಿ ಹಸುವಿಗೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಜೋತು ಬಿದ್ದಿದ್ದ ಮಾಂಸ ಖಂಡಗಳನ್ನು ಹೊರ ತೆಗೆದ ನಂತರ ಹಸು ಮತ್ತಷ್ಟು ಚೇತರಿಸಿಕೊಳ್ಳುತ್ತಿದ್ದು ಕುತ್ತಿಗೆ ಭಾಗದಲ್ಲಿ ಹುಲಿ ಉಗುರಿನಿಂದ ಮಾಡಿದ ಗಾಯಗಳನ್ನು ಗುಣಪಡಿಸುವತ್ತ ವೈದ್ಯರು ಹೆಚ್ಚಿನ ಗಮನ ಹರಿಸಿದ್ದಾರೆ. ಕೆಲವೆ ದಿನಗಳಲ್ಲಿ ಹಸು ಕರುವಿಗೆ ಜನ್ಮ ನೀಡುವ ಸಾಧ್ಯತೆ ಇದೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.
- ಹೆಚ್.ಕೆ.ಜಗದೀಶ್