ಗೋಣಿಕೊಪ್ಪ ವರದಿ, ಮೇ 18: ನೂತನವಾಗಿ ತಾಲೂಕು ಘೋಷಣೆ ಯಾಗಿರುವ ಪೊನ್ನಂಪೇಟೆಗೆ ತಹಶೀಲ್ದಾರ್ ನೇಮಕಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭರವಸೆ ನೀಡಿದರು.ತಾಲೂಕು ಕಚೇರಿ ನಿರ್ವಹಣೆಗೆ ಇಲ್ಲಿನ ಆಹಾರ ಇಲಾಖೆ ಕಟ್ಟಡವನ್ನು ಬಳಸಿಕೊಳ್ಳುವಂತೆ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಹಾಗೂ ಹಿರಿಯ ನಾಗರಿಕ ವೇದಿಕೆ ಮನವಿಯನ್ನು ಪರಿಗಣಿಸಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ತಾಲೂಕು ಕಚೇರಿಗೆ ನಿಗದಿ ಪಡಿಸಿರುವ ಸ್ಥಳ ಸೂಕ್ತವಾಗಿದೆ. ವಿಶಾಲವಾದ ಕಟ್ಟಡ ಇರುವುದರಿಂದ ಒಂದೇ ಸೂರಿನಲ್ಲಿ (ಮೊದಲ ಪುಟದಿಂದ) ಎಲ್ಲಾ ಇಲಾಖೆಗಳನ್ನು ಕಾರ್ಯನಿರ್ವಹಿಸುವಂತೆ ಮಾಡಬಹುದು. ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಅಲ್ಲದೆ, ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿ ಇದೇ ಜಾಗದಲ್ಲಿ ಮಿನಿ ವಿಧಾನ ಸೌಧ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲು ಮುಂದಾಗುವದಾಗಿ ತಿಳಿಸಿದರು. ತಹಶೀಲ್ದಾರ್ ನೇಮಕಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುವದಾಗಿ ಈ ಸಂದರ್ಭ ತಿಳಿಸಿದರು. ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಹಾಗೂ ಹಿರಿಯ ನಾಗರಿಕ ವೇದಿಕೆ ವತಿಯಿಂದ ಮನವಿ ಸ್ವೀಕರಿಸಿದರು. ಭೇಟಿ ಸಂದರ್ಭ ತಹಶೀಲ್ದಾರ್ ಗೋವಿಂದರಾಜು, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಸುಮಿತಾ ಗಣೇಶ್, ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಸದಸ್ಯರುಗಳಾದ ಮತ್ರಂಡ ಅಪ್ಪಚ್ಚು, ಎರ್ಮು ಹಾಜಿ, ಮೂಕಳೇರ ಕುಶಾಲಪ್ಪ, ಚೆಪ್ಪುಡೀರ ಸೋಮಯ್ಯ, ಕಂದಾಯ ನಿರೀಕ್ಷಕ ರಾಧಕೃಷ್ಣ ಉಪಸ್ಥಿತರಿದ್ದರು. - ಸುದ್ದಿಪುತ್ರ