ಮಡಿಕೇರಿ, ಮೇ 18: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡುವಿನ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾಟಗಳು ತಾ. 19 ರಂದು (ಇಂದು) ನಡೆಯಲಿದೆ. ಅಂತಿಮ ದಿನದ ಆಕರ್ಷಣೆಯಾಗಿ ಬೈಕ್ ಸಾಹಸ ಪ್ರದರ್ಶನ, ಜಾದೂ ಹಾಗೂ ಬೃಹತ್ ಎಲ್‍ಇಡಿ ಪರದೆ ಮೂಲಕ ಪಂದ್ಯಾವಳಿ ವೀಕ್ಷಣೆಯ ಅವಕಾಶ ಕಲ್ಪಿಸಲಾಗಿದೆ. ಸೆಮಿಫೈನಲ್ ಹಂತಕ್ಕೆ ಪೊನ್ನಚನ, ಕೊಂಪುಳಿ, ಪಾಣತ್ತಲೆ ಹಾಗೂ ಕಟ್ಟೆಮನೆ ತಂಡಗಳು ಪ್ರವೇಶ ಪಡೆದುಕೊಂಡಿವೆ.(ಮೊದಲ ಪುಟದಿಂದ) ಇಂದು ನಡೆದ ಪಂದ್ಯಾಟದಲ್ಲಿ ಕುಯ್ಯಮುಡಿ ತಂಡ ಕೋಚನ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. ಚರಣ್, ಜಗ್ಗು, ಕನಕ, ಭುವನ್ ಗೋಲು ದಾಖಲಿಸಿದರು. ಕಟ್ಟೆಮನೆ ತಂಡ ಅಯ್ಯಂಡ್ರ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಕಟ್ಟೆಮನೆ ಪ್ರೀತಂ ಹ್ಯಾಟ್ರಿಕ್ ಸಾಧನೆಯೊಂದಿಗೆ ಗಮನ ಸೆಳೆದರು. ಕಡ್ಯದ ತಂಡ ಕುಯ್ಯಮುಡಿ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ಪ್ರವೀಣ್ ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಕಟ್ಟೆಮನೆ ತಂಡ ತೆಕ್ಕಡೆ ತಂಡವನ್ನು 1-0 ಗೋಲಿನಿಂದ ಸೋಲಿಸಿತು ಪ್ರೀತಂ ಗೋಲು ದಾಖಲಿಸಿದರು.ಪೊನ್ನಚನ ಹಾಗೂ ಬೊಳ್ಳೂರು ತಂಡಗಳ ನಡುವಿನ ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಪೊನ್ನಚನ ತಂಡ 2-1 ಗೋಲುಗಳಿಂದ ಬೊಳ್ಳೂರು ತಂಡವನ್ನು ಮಣಿಸಿ, ಸೆಮಿಫೈನಲ್‍ಗೇರಿತು. ದರ್ಶನ್ ಹಾಗೂ ಕವನ್ ಗೋಲು ಬಾರಿಸಿದರೆ, ಬೊಳ್ಳೂರು ಪರ ಮೋನಿಶ್ ಗೋಲು ದಾಖಲಿಸಿದರು.

ಕೊಂಪುಳಿರ ಹಾಗೂ ಕಾಂಗಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕೊಂಪುಳಿ ತಂಡ 3-1 ಗೋಲುಗಳಿಂದ ಕಾಂಗಿರ ತಂಡವನ್ನು ಸೋಲಿಸಿ, ಸೆಮಿಗೆ ಅರ್ಹತೆ ಪಡೆದುಕೊಂಡಿತು. ಜಗ್ಗ 2, ತೀಕ್ಷಣ್ 1 ಗೋಲು ಗಳಿಸಿದರೆ, ಕಾಂಗಿರ ಯತಿನ್ 1 ಗೋಲು ದಾಖಲಿಸಿದರು. ಪಾಣತ್ತಲೆ ಹಾಗೂ ಪೊಕ್ಕುಳಂಡ್ರ ತಂಡಗಳ ನಡುವೆ ನಡೆದ ರೋಚಕ ಪಂದ್ಯಾಟದಲ್ಲಿ ಪಾಣತ್ತಲೆ ತಂಡ 4-0 ಗೋಲುಗಳಿಂದ ಸೋಲಿಸಿತು. ಜಗದೀಶ್ 2, ವಿಕ್ರಂ, ಮಧು ತಲಾ 1 ಗೋಲು ದಾಖಲಿಸಿದರು. ಕಡ್ಯದ ಹಾಗೂ ಕಟ್ಟೆಮನೆ ತಂಡಗಳ ನಡುವಿನ ಪಂದ್ಯಾಟದಲ್ಲಿ ಪೂರ್ಣಾವಧಿಯಲ್ಲಿ 2-2 ಗೋಲುಗಳಿಂದ ಸಮನಾಯಿತು. ನಂತರ ದೊರೆತ ಟೈಬ್ರೇಕರ್ ಅವಕಾಶದಲ್ಲಿ ಕಟ್ಟೆಮನೆ 4-3 ಗೋಲುಗಳ ಅಂತರದಿಂದ ಜಯಗಳಿಸಿ ಸೆಮಿಫೈನಲ್‍ಗೇರಿತು. ಪೂರ್ಣಾವಧಿಯಲ್ಲಿ ಕಟ್ಟೆಮನೆ ದೀಪು, ಪ್ರೀತಂ ಗೋಲು ಬಾರಿಸಿದರೆ, ಕಡ್ಯದ ಪರ ದರ್ಶನ್, ರಿಶಿ ಗೋಲು ಗಳಿಸಿದರು.