ಗೋಣಿಕೊಪ್ಪಲು, ಮೇ 18: ಸಾರ್ವಜನಿಕರ, ಸಂಘ-ಸಂಸ್ಥೆಗಳ ವ್ಯಾಪಕ ವಿರೋಧದ ಹಿನ್ನೆಲೆ ಎಚ್ಚೆತ್ತುಕೊಂಡ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ನಗರದಲ್ಲಿದ್ದ ಲೋಡ್‍ಗಟ್ಟಲೆ ಕಸದ ರಾಶಿಯನ್ನು ತೆರವು ಮಾಡಿದೆ. ಇಲ್ಲಿನ ಪೌರ ಕಾರ್ಮಿಕರು ಮುಂಜಾನೆಯಿಂದಲೇ ಕೊಳೆತು ನಾರುತ್ತಿದ್ದ ಕಸಗಳನ್ನು ತೆರವುಗೊಳಿಸಿ ಶುಚಿಗೊಳಿಸಿದರು. ಮುಂಜಾಗ್ರತಾ ಕ್ರಮವಾಗಿ ಕಸ ತೆಗೆದ ಸ್ಥಳಗಳಲ್ಲಿ ರೋಗ ಹರಡದಂತೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿದರು.

ಗೋಣಿಕೊಪ್ಪಲುವಿನ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಗೋಣಿಕೊಪ್ಪ ಪಂಚಾಯಿತಿ ಸರ್ವ ಸದಸ್ಯರು ಶುಕ್ರವಾರ ನಡೆಸಿದ ತುರ್ತು ಸಭೆಯಲ್ಲಿ ತೆಗೆದುಕೊಂಡ ತೀರ್ಮಾನ ತಕ್ಷಣದಿಂದ ಜಾರಿಗೆ ಬಂದಿದ್ದು ಕಸ ವಿಲೇವಾರಿ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಮಾರ್ಕೆಟ್ ಆವರಣ, ಬಸ್ ನಿಲ್ದಾಣ ಮುಂಭಾಗ, ರಾಜ್ಯ ರಸ್ತೆಯ ಎರಡು ಬದಿಗಳಲ್ಲಿ ಹಾಗೂ ಬೈ ಪಾಸ್ ರಸ್ತೆಯಲ್ಲಿ ರಾಶಿ ರಾಶಿ ಕಸಗಳು ಲೋಡ್‍ಗಟ್ಟಲೆ ಸಂಗ್ರಹವಾಗಿದ್ದು, ಎರಡು ದಿನಗಳಲ್ಲಿ ಇವುಗಳನ್ನು ಸಂಪೂರ್ಣ ವಿಲೇವಾರಿ ಮಾಡುವ ಭರವಸೆಯನ್ನು ಪೌರ ಕಾರ್ಮಿಕರು ನೀಡಿದರು. ಕಸಗಳನ್ನು ವಿಂಗಡಿಸಿ ನೀಡುವಂತೆ ಪೌರ ಕಾರ್ಮಿಕರು ವರ್ತಕರಿಗೆ ಮನವಿ ಮಾಡಿದ್ದಾರೆ.

ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್, ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ, ಅಧಿಕಾರಿಗಳ, ಸಂಘ-ಸಂಸ್ಥೆಯ ಮುಖಂಡರನ್ನೊಳಗೊಂಡ ಸತತ ಹಲವು ಸಭೆಗಳನ್ನು ನಡೆಸುವ ಮೂಲಕ ಕಸ ವಿಲೇವಾರಿಗೆ ಕೈಗೊಂಡ ಕ್ರಮವನ್ನು ಇಲ್ಲಿ ಸ್ಮರಿಸಬಹುದು.