ಕುಶಾಲನಗರ, ಮೇ 18: ಕುಶಾಲನಗರ ಪಟ್ಟಣದಲ್ಲಿ ಸಾವಿರಾರು ಆಟೋಗಳು ದಿನನಿತ್ಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದು ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಆರೋಪದ ಹಿನ್ನೆಲೆ ಸ್ಥಳೀಯ ಸಂಚಾರಿ ಪೊಲೀಸರು ಆಟೋಗಳ ದಾಖಲೆ ಪರಿಶೀಲನೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸಾರ್ವಜನಿಕರ ದೂರಿನ ಹಿನ್ನೆಲೆ ಡಿವೈಎಸ್ಪಿ ದಿನಕರ ಶೆಟ್ಟಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ದಿನೇಶ್‍ಕುಮಾರ್ ಮತ್ತು ಸ್ಥಳೀಯ ಸಂಚಾರಿ ಠಾಣಾಧಿಕಾರಿ ಸೋಮೇಗೌಡ ಮತ್ತು ಸಿಬ್ಬಂದಿಗಳು ಪ್ರತಿ ಆಟೋಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕುಶಾಲನಗರದಲ್ಲಿ 1400ಕ್ಕೂ ಆಟೋ ರಿಕ್ಷಾಗಳು ಓಡಾಡುತ್ತಿದ್ದು ಕೆಲವು ಆಟೋ ರಿಕ್ಷಾಗಳಿಗೆ ದಾಖಲೆಗಳಿಲ್ಲದೆ ಹಾಗೂ ನಕಲಿ ದಾಖಲೆಗಳೊಂದಿಗೆ ಸಂಚರಿಸುತ್ತಿರುವದು ಗೋಚರಿಸಿದ್ದು, ಅಪಘಾತಗಳು ಸಂಭವಿಸಿದ ಸಂದರ್ಭ ಪ್ರಯಾಣಿಕರಿಗೆ ಯಾವದೇ ರೀತಿಯ ವಿಮಾ ಸೌಲಭ್ಯ ದೊರಕದಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ಕೆಲವು ಆಟೋಗಳು ನಿಯಮಬಾಹಿರವಾಗಿ ಸಂಚರಿಸುತ್ತಿವೆ. ಹೊರ ಜಿಲ್ಲೆಗಳಿಂದ ತಂದ ಆಟೋಗಳು ಓಡಾಡುತ್ತಿರುವ ಬಗ್ಗೆ ಸಂಶಯಗಳು ತಲೆದೋರಿದ್ದು ಇದರೊಂದಿಗೆ ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘನೆಯಾಗುತ್ತಿರುವದು ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.