ಮಡಿಕೇರಿ, ಮೇ 18: ಕೊಡಗು ಜಿಲ್ಲೆಯ ಕೆಲವು ಅಧಿಕಾರಿಗಳು ಸಣ್ಣ, ಪುಟ್ಟ ವಿಚಾರಗಳನ್ನೇ ದೊಡ್ಡದು ಮಾಡಿ ಜನಸಾಮಾನ್ಯರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ), ಇದೇ ಪರಿಸ್ಥಿತಿ ಮುಂದುವರಿದರೆ ಸಂಘಟಿತ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಡಾ. ಇ.ರ. ದುರ್ಗಾಪ್ರಸಾದ್ ಅವರು, ಜಿಲ್ಲೆಯಲ್ಲಿ ಜನಸಾಮಾನ್ಯರು ಅದರಲ್ಲೂ ಬುಡಕಟ್ಟು ಜನರು ಮತ್ತು ಮಹಿಳೆಯರ ಮೇಲೆ ಸರ್ಕಾರಿ ಅಧಿಕಾರಿಗಳ ಕಿರುಕುಳ, ಬೆದರಿಕೆ ಹೆಚ್ಚಾಗಿದೆ. ಕಡಂಗ ಅರಪಟ್ಟು ಗ್ರಾಮದಲ್ಲಿ ಮಹಿಳೆಯೊಬ್ಬರ ಸಂಶಯಾಸ್ಪದ ಸಾವಿನ ಬಗ್ಗೆ ಧ್ವನಿ ಎತ್ತಿದ ಮಹಿಳಾ ಸಂಘಟನೆಗಳ ಪ್ರಮುಖರಿಗೆ ಪೊಲೀಸ್ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡಿದ್ದಾರೆ. ಮಹಿಳೆಯರ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಅವರುಗಳನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ನಡೆದಿದೆ ಎಂದು ಆರೋಪಿಸಿದರು.

ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಕನೊಬ್ಬ ಮಾಡಿದ ಒಂದು ಸಣ್ಣ ತಪ್ಪನ್ನೇ ಪೊಲೀಸರು ಉತ್ಪ್ರೇಕ್ಷಿಸಿ ಅಂತಹವರ ಎದುರು ತಾವು ಪ್ರಾಮಾಣಿಕರು ಎಂದು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಪೈಸಾರಿ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿರುವ ಆರ್ಥಿಕವಾಗಿ ದುರ್ಬಲವಾಗಿರುವ ಬುಡಕಟ್ಟು ಜನರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯ ಹೆಚ್ಚುತ್ತಿದ್ದು, ಅವರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ.

ಸರ್ಕಾರಿ ಜಮೀನನ್ನು ಅರಣ್ಯ ಪ್ರದೇಶವೆಂದು ತಾವೇ ಘೋಷಿಸಿಕೊಂಡು ಬಡಜನರ ಮೇಲೆ ದೌರ್ಜನ್ಯ ಎಸಗುತ್ತಿರುವದು ಅಧಿಕವಾಗಿದೆ. ಆದರೆ, ಪ್ರಭಾವಿಗಳು ನೂರಾರು ಎಕರೆ ಜಾಗವನ್ನು ಕಬಳಿಸಿದ್ದರೂ, ಈ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳು ನಡೆಯದೆ ಎಲ್ಲಾ ಕ್ಷೇತ್ರಗಳಲ್ಲೂ ವಿವಿಧ ರೀತಿಯಲ್ಲಿ ಹಿಂಸೆ ಅನುಭವಿ ಸುತ್ತಿದ್ದಾರೆ. ಜನ ಸಾಮಾನ್ಯರಿಗೆ ನ್ಯಾಯ ಮರೀಚಿಕೆಯಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗಾಂಜಾ ದಂಧೆ ಸೇರಿದಂತೆ ಸಮಾಜಘಾತುಕ ಕೃತ್ಯಗಳು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಅಥವಾ ಅವರ ಸಹಭಾಗಿತ್ವದಲ್ಲೇ ನಡೆಯುತ್ತಿದ್ದು, ಇವುಗಳ ಬಗ್ಗೆ ಸರ್ಕಾರ ದಿವ್ಯಮೌನ ಪ್ರದರ್ಶಿಸುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.