ಮಾಕುಟ್ಟ, ಮೇ.16; ಇಂದು ಸಂಜೆ 5 ಗಂಟೆ ವೇಳೆಗೆ ಮಾಕುಟ್ಟ ಪೊಲೀಸ್ ಚೆಕ್ ಪೋಸ್ಟ್ ನಿಂದ ಕೆಲವು ಮೀಟರ್ ಅಂತರದಲ್ಲಿ ಭಾರೀ ಗಾತ್ರದ ಮರದ ರೆಂಬೆ ಕೊಡಗು ಕೇರಳ ಅಂತರರಾಜ್ಯ ಹೆದ್ದಾರಿ ಮೇಲೆ ಉರುಳಿದ ಪರಿಣಾಮ 3 ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಅರಣ್ಯ ಇಲಾಖೆ, ಅಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಮತ್ತು ಗ್ರಾಮಸ್ಥರ ನೆರವಿನೊಂದಿಗೆ ಮರವನ್ನು ತೆರವು ಗೊಳಿಸಲಾಯಿತು. ಯಾವದೇ ಜೀವ ಹಾನಿ, ಅಪಾಯ ಸಂಭವಿಸಿಲ್ಲ.ಯಾವದೇ ಮಳೆ ಗಾಳಿ ಇಲ್ಲದಿದ್ದರೂ ಮರದ ಒಳಭಾಗ ಪೊಳ್ಳಾಗಿದ್ದ ಹಿನ್ನೆಲೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ.ಮಾಕುಟ್ಟ ರಸ್ತೆ ಉದ್ದಕ್ಕೂ ಕಳೆದ ಜಲಪ್ರಳಯ ಸಂದರ್ಭ ಹಲವು ಮರಗಳು ಅಪಾಯಕಾರಿಯಾಗಿ ಧರೆಗುರುಳಿದ್ದು ಇಬ್ಬರು ಜಿಲ್ಲೆಯಲ್ಲಿ ಮೊದಲಿಗೆ ಸಾವನ್ನಪ್ಪಿದ್ದರು.ಇದೀಗ ರಸ್ತೆ ಬದಿ ಹಲವು ಮರಗಳು ಇಬ್ಬದಿಯ ಅರಣ್ಯಪ್ರದೇಶದಿಂದ ರಸ್ತೆ ಮೇಲೆ ಬೀಳುವ ಸಾಧ್ಯತೆ ಇದ್ದು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಯಾವದೇ ಜೀವಹಾನಿಯಾಗದಂತೆ ತುರ್ತು ಕ್ರಮ ಜರುಗಿಸುವ ಅಗತ್ಯ ಕಂಡು ಬಂದಿದೆ. -ಟಿ.ಎಲ್.ಎಸ್.