(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಮೇ 15: ಹದಿನೇಳನೆಯ ಲೋಕಸಭಾ ಚುನಾವಣೆಯ ಮತಸಮರ ಈಗಾಗಲೇ ಮುಕ್ತಾಯಗೊಂಡಿದ್ದು, ನಿರ್ಣಾಯಕವಾದ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಕೊಡಗು - ಮೈಸೂರು ಕ್ಷೇತ್ರದ ಚುನಾವಣೆ ರಾಜ್ಯದಲ್ಲಿ ಪ್ರಥಮ ಹಂತದಲ್ಲೇ ನಡೆದಿದ್ದು, ದೇಶದಲ್ಲಿ ಏಳು ಹಂತದ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಫಲಿತಾಂಶಕ್ಕಾಗಿ ಇನ್ನು 7 ದಿನಗಳು ಬಾಕಿ ಉಳಿದಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ತಮ್ಮ ಆಂತರಿಕವಾದ ಸಮೀಕ್ಷೆಯನ್ನು ನಡೆಸಿವೆ.
ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 22 ಸ್ಪರ್ಧಾಳುಗಳಿದ್ದರೂ ನೇರ ಸ್ಪರ್ಧೆ ಇರುವದು ಬಿಜೆಪಿಯ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅವರ ನಡುವೆ. ಗುಪ್ತಚರ ಇಲಾಖೆಯ ಅಂದಾಜು ಸಮೀಕ್ಷೆಯೂ ನಡೆದಿದ್ದು, ಇಬ್ಬರಲ್ಲಿ ಯಾರು ವಿಜಯಶಾಲಿಗಳಾಗಲಿದ್ದಾರೆ ಎಂಬದನ್ನು ಖಚಿತವಾಗಿ ಊಹಿಸಲು ಕಷ್ಟ ಸಾಧ್ಯವೆನ್ನಲಾಗುತ್ತಿದೆ. ಎರಡು ಪಾಳಯದಲ್ಲೂ ಈ ಬಾರಿಯ ಚುನಾವಣೆಯಲ್ಲಿ ‘ಪ್ಲಸ್ ಪಾಯಿಂಟ್ ಹಾಗೂ ಮೈನಸ್ ಪಾಯಿಂಟ್’ಗಳು ಇವೆ ಎನ್ನುವ ಚರ್ಚೆ ಸಾಮಾನ್ಯವಾಗಿದೆ. ಯಾರೇ ಜಯಗಳಿಸಿದರೂ ಮತಗಳ ಅಂತರ ಹತ್ತರಿಂದ - ಹದಿನೈದು ಸಾವಿರದಷ್ಟೇ ಎಂಬದೂ ಒಂದು ವಿಶ್ಲೇಷಣೆಯಾಗಿ ಕೇಳಿಬರುತ್ತಿದೆ.
ಗೆಲವು ತಮ್ಮದೇ
ಈ ಬಾರಿಯ ಚುನಾವಣೆಯಲ್ಲಿನ ಫಲಿತಾಂಶದ ನಿರೀಕ್ಷೆಯ ಕುರಿತು ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಜಿಲ್ಲಾ ಅಧ್ಯಕ್ಷರುಗಳನ್ನು ‘ಶಕ್ತಿ’ ಮಾತನಾಡಿಸಿದ ಸಂದರ್ಭ ಮೂರು ಅಧ್ಯಕ್ಷರುಗಳೂ ತಮ್ಮ ಅಭ್ಯರ್ಥಿಯ ಗೆಲವು ಖಚಿತ ಎಂದು ಹೇಳಿಕೊಳ್ಳುತ್ತಿದ್ದಾರೆ.
ಅವರವರ ಅಭಿಪ್ರಾಯಗಳೇನು?
ಕೊಡಗಿನಿಂದ ಅಧಿಕ ಮತ
ಬಿಜೆಪಿ : ಬಿಜೆಪಿಯ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಕನಿಷ್ಟ 55 ಸಾವಿರದಿಂದ 75 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ. ಕೊಡಗು ಜಿಲ್ಲೆಯ ಎರಡು ಕ್ಷೇತ್ರದಿಂದಲೂ ಪಕ್ಷಕ್ಕೆ ಅಧಿಕ ಮತ ದೊರೆಯುವದು ಖಚಿತ. ಶೇ. 56ಕ್ಕೂ ಅಧಿಕ ಮತ ಪಕ್ಷಕ್ಕೆ ಬಂದಿರುವದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಚುನಾವಣೆಯಲ್ಲಿ ಕಳೆದ ಲೋಕಸಭಾ ಚುನಾವಣೆಗಿಂತ ಅಧಿಕ ಮತದಾನವಾಗಿದೆ, ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ 20 ಸಾವಿರದಷ್ಟು ಅಧಿಕ ಮತ ದೊರೆತಿರುವದೂ ಪೂರಕ ವಾಗಲಿದೆ. ಇದರೊಂದಿಗೆ ಮೋದಿ ಹವಾ ಹೊಸ ಮತದಾರರ ಬೆಂಬಲ, ಮೋದಿ ಜನಪ್ರಿಯತೆ ಯಿಂದ ಪ್ರೇರೇಪಿತರಾಗಿ ಇತರ ಪಕ್ಷಗಳಿಂದಲೂ ಒಳಗಿನಿಂದ ಚಲಾವಣೆಯಾಗಿರುವ ಮತಗಳಿಂದ ಪ್ರತಾಪ್ ಸಿಂಹ ಅವರು ಮತ್ತೊಮ್ಮೆ ಸಂಸದರಾಗಿ ಆರಿಸಿ ಬರಲಿದ್ದಾರೆ ಎಂದು ಭಾರತೀಶ್ ನುಡಿದರು. ಇಡೀ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವೆಡೆಗಳಲ್ಲಿ ನಿರೀಕ್ಷಿತ ಮತಗಳು ಬರದಿದ್ದರೂ ಎಲ್ಲಾ ಲೆಕ್ಕಾಚಾರಗಳ ಪ್ರಕಾರ ತಮ್ಮ ಅಭ್ಯರ್ಥಿ ಗೆಲ್ಲುವದು ಖಚಿತ ಎಂಬದು ಅವರ ನಿಲುವು.
ಕಾಂಗ್ರೆಸ್ : ಈ ಬಾರಿ ನಮ್ಮ ಅಭ್ಯರ್ಥಿ ವಿಜಯ್‍ಶಂಕರ್ ಅವರು ಗೆಲ್ಲುವದು ಖಚಿತ ಎನ್ನುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ ತಮ್ಮ ನಿರೀಕ್ಷೆಗೆ ನೀಡುವ ಕಾರಣಗಳು ಹೀಗಿವೆ. ಕೊಡಗಿನಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಈ ಬಾರಿ ತಮ್ಮ ಬಳಗಕ್ಕೆ ಹೆಚ್ಚು ಮತ ದೊರೆತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ 24 ಸಾವಿರ ಮತ ಕಡಿಮೆಯಾಗಿತ್ತು. ಆದರೆ ಈ ಬಾರಿ ಇದು ಸರಿದೂಗಿದೆ. ಜತೆಗೆ ಜೆಡಿಎಸ್ ಮೈತ್ರಿಯಿಂದಲೂ ಅನುಕೂಲವಾಗಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ಕಳೆದ ಚುನಾವಣೆಯ ರೀತಿಯಲ್ಲಿಯೇ ಯಥಾಸ್ಥಿತಿ ಮುಂದು ವರಿಯುತ್ತದೆ.
ಕೃಷ್ಣರಾಜ - ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಯೊಂದಿಗೆ ಸಮಬಲ ಸಾಧನೆಯಾಗಿದೆ. ಹುಣಸೂರು, ಪಿರಿಯಾಪಟ್ಟಣ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿಯಲ್ಲಿ ವಿಜಯ್‍ಶಂಕರ್ ಅವರಿಗೆ ಅಧಿಕ ಮತಗಳು ದೊರೆಯಲಿವೆ ಎನ್ನುತ್ತಾರೆ ಮಂಜುನಾಥ್. ಇವರ ಅಭಿಪ್ರಾಯದಂತೆ 60 ಸಾವಿರದಷ್ಟು ಅಧಿಕ ಮತಗಳು ಲಭಿಸಲಿವೆಯಂತೆ.!
ಗೆಲ್ಲುತ್ತೇವೆ - ಸೋತರೆ ಕಾಂಗ್ರೆಸ್ ಕಾರಣ
ಜೆಡಿಎಸ್: ಈ ಚುನಾವಣೆಯಲ್ಲಿ ಸಣ್ಣ ಅಂತರದಿಂದಾದರೂ ಮೈತ್ರಿಕೂಟದ ಅಭ್ಯರ್ಥಿ ವಿಜಯ್‍ಶಂಕರ್ ಅವರು ಗೆಲುವು ಸಾಧಿಸಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ಎಂ. ಗಣೇಶ್ ಅವರು ಒಂದು ವೇಳೆ ಸೋಲುಂಟಾದಲ್ಲಿ ಇದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದರು. ಚುನಾವಣೆ ಸಂದರ್ಭ ಕಾಂಗ್ರೆಸ್‍ನವರು ಜೆಡಿಎಸ್ ಅನ್ನು ಸಂಪೂರ್ಣವಾಗಿ ಕಡೆಗಣಿ ಸಿದ್ದಾರೆ. ಅಲ್ಪಸಂಖ್ಯಾತರಿಗೂ ಕಾಂಗ್ರೆಸ್‍ನ ನಡೆ ಬೇಸರ ಮೂಡಿಸಿದೆಯಾದರೂ ಅವರು ಮತ ನೀಡಿದ್ದಾರೆ.
ಕೊಡಗು ಕಾಂಗ್ರೆಸ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ ಯಾರದೋ ಮಾತು ಕೇಳಿಕೊಂಡು ಜೆಡಿಎಸ್ ಅನ್ನು ನಿರ್ಲಕ್ಷಿಸಿದೆ ಎಂದು ಗಣೇಶ್ ಗಂಭೀರ ಆರೋಪವನ್ನೇ ಮಾಡಿದ್ದಾರೆ.