ಮಡಿಕೇರಿ, ಮೇ 17: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಮೂಲಕ ಕೊಡಗಿನಲ್ಲಿ ಆರಂಭಗೊಂಡಿರುವ ಪ್ರಪ್ರಥಮ ಸ್ಕ್ವಾಷ್ ಕ್ರೀಡಾಂಗಣ ಹಾಗೂ ರಾಜ್ಯದ ಎರಡನೇ ಬಾಕ್ಸಿಂಗ್ ಕೋರ್ಟ್‍ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಈ ಹಿಂದೆ ಕ್ರೀಡಾ ಸಚಿವರಾಗಿದ್ದ ರಂಜನ್ ಅವರು, ಜಿಲ್ಲೆಗೆ ಈ ಕೊಡುಗೆ ಮಂಜೂರು ಮಾಡುವಲ್ಲಿ ಯಶಸ್ವಿಯಾಗಿದ್ದರು.ಬಾಕ್ಸಿಂಗ್ ಕೋರ್ಟ್‍ಗೆ ತೆರಳಿದ ಅವರು, ಮೇಲ್ಚಾವಣಿಯಿಂದ ಕೋರ್ಟ್‍ಗೆ (ಮೊದಲ ಪುಟದಿಂದ) ಕಸ- ಕಡ್ಡಿಗಳು ಬೀಳುವ ಸಾಧ್ಯತೆ ಬಗ್ಗೆ ಮಾಹಿತಿ ಪಡೆದರು. ನಂತರ ಸ್ಕ್ವಾಷ್ ಕ್ರೀಡಾಂಗಣಕ್ಕೆ ತೆರಳಿ ನೆಲ ಭಾಗದಲ್ಲಿ ಆಗಬೇಕಿರುವ ‘ವ್ಯಾಕ್ಸ್ ಫಿಲ್ಲಿಂಗ್’ ಕಾರ್ಯದ ಬಗ್ಗೆ ಪರಿಶೀಲಿಸಿದರು. ನಂತರ ಭೂಸೇನಾ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಸ್ಕ್ವಾಷ್ ಹಾಗೂ ಬಾಕ್ಸಿಂಗ್ ಕೋರ್ಟ್‍ನಲ್ಲಿ ಆಗಬೇಕಿರುವ ಅಂತಿಮ ಹಂತದ ಕೆಲಸಗಳ ಬಗ್ಗೆ ಗಮನ ಸೆಳೆದು ಕೂಡಲೇ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದರು. ನಂತರ ಈಜುಕೊಳಕ್ಕೂ ರಂಜನ್ ಭೇಟಿ ನೀಡಿದರು.
ಈ ಸಂದರ್ಭ ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಜಯಲಕ್ಷ್ಮಿಬಾಯಿ, ಮೊಗೇರ ಸಮಾಜದ ಮುಖಂಡ ರವಿ ಇದ್ದರು.